ಕಾರವಾರ: ಪರೀಕ್ಷೆಗೆ ಗೋವಾದಿಂದ 61 ಮಕ್ಕಳು

ಕಾರವಾರ: ಗೋವಾದಲ್ಲಿರುವ ಕರ್ನಾಟಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಬಾರಿಯೂ ಕಾರವಾರಕ್ಕೇ ಬಂದು ಪರೀಕ್ಷೆ ಬರೆಯಲಿದ್ದಾರೆ. ತಾಲ್ಲೂಕಿನ ಉಳಗಾದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅವರಿಗೆ ಶಿಕ್ಷಣ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುತ್ತದೆ.
ಈ ಬಾರಿ ಗೋವಾದಿಂದ ಕಾರವಾರಕ್ಕೆ ಬಂದು ಪರೀಕ್ಷೆಯ ಬರೆಯುವ ಒಟ್ಟು 61 ಮಕ್ಕಳಿದ್ದಾರೆ. ಅವರಲ್ಲಿ 47 ಮಂದಿ ಹೊಸಬರಾದರೆ, ಉಳಿದ 14 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ವಾಸ್ಕೊ ಮತ್ತು ಜೆರಿ ಎಂಬಲ್ಲಿ ಎರಡು ಅನುದಾನಿತ ಶಾಲೆಗಳಿದ್ದು, ಕರ್ನಾಟಕ ರಾಜ್ಯದ ಪಠ್ಯಕ್ರಮದಂತೆ ಬೋಧನೆ ನಡೆಯತ್ತದೆ.
ಗೋವಾದ ಪಣಜಿ, ವಾಸ್ಕೊ, ಮಡಗಾಂವ್ ಸೇರಿದಂತೆ ವಿವಿಧ ನಗರಗಳಲ್ಲಿ ಕನ್ನಡಿಗರ ಕುಟುಂಬಗಳಿವೆ. ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ ಕನ್ನಡಿಗರು ಅಲ್ಲಿ ದುಡಿಯುತ್ತಿದ್ದಾರೆ. ಅವರಲ್ಲಿ ಹಲವರು ಕಡುಬಡವರಾಗಿದ್ದು, ಕೂಲಿ ಕೆಲಸ ಮಾಡುತ್ತಾರೆ. ಅಲ್ಲಿ ಮಕ್ಕಳನ್ನು ಗೋವಾದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಆರ್ಥಿಕ ಬಲ ಅವರಲ್ಲಿಲ್ಲ. ಅಲ್ಲದೇ ವಿದ್ಯಾಭ್ಯಾಸದ ಕೊರತೆಯಿಂದ ಮನೆಯಲ್ಲೂ ಅಧ್ಯಯನಕ್ಕೆ ಸಹಕರಿಸಲಾಗದ ಸ್ಥಿತಿಯುಂಟು ಮಾಡಿದೆ. ಅವರ ವಿದ್ಯಾಭ್ಯಾಸಕ್ಕೆ ಕನ್ನಡ ಶಾಲೆಗಳು ಅತ್ಯಂತ ಮಹತ್ವದ್ದಾಗಿವೆ.
ಎರಡು ಶೈಕ್ಷಣಿಕ ವರ್ಷಗಳ ಹಿಂದಿನವರೆಗೂ ಅಂದರೆ, ಕೊರೊನಾ ವ್ಯಾಪಿಸುವ ಮೊದಲು ಗೋವಾದ ಶಾಲೆಗಳಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಪತ್ರಿಕೆಗಳೊಂದಿಗೆ ಅಲ್ಲಿಗೆ ತೆರಳಿ ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಬರುತ್ತಿದ್ದರು.
ಕೋವಿಡ್ ಕಾರಣದಿಂದ ಎರಡೂ ರಾಜ್ಯಗಳ ನಡುವೆ ಸಂಚಾರ ನಿರ್ಬಂಧ ಹಾಗೂ ಆಯಾ ರಾಜ್ಯಗಳ ನಿಯಮಾಳಿಗಳ ಪಾಲನೆಯ ಸಲುವಾಗಿ ಇದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರಿಗೆ ತೊಂದರೆಯಾಗದಂತೆ ಕಾರವಾರದ ಉಳಗಾದ ಸರ್ಕಾರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
2,131 ವಿದ್ಯಾರ್ಥಿಗಳು: ಈ ಬಾರಿ ಕಾರವಾರ ತಾಲ್ಲೂಕಿನಲ್ಲಿ 2,131 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಶಾಲೆಗಳು ತೆರೆದು ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಅವರು ತರಗತಿಗಳಿಗೆ ಬರಲು ಇನ್ನೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲಾಗಿದೆ. ಜುಲೈ 19 ಮತ್ತು 22ರಂದು ನಡೆಯಲಿರುವ ಹೊಸ ಪದ್ಧತಿಯ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಬಹು ಆಯ್ಕೆ ರೀತಿಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ತಿಳಿಸಿದ್ದಾರೆ.
***
* ಗೋವಾದಲ್ಲಿರುವ ಕನ್ನಡ ವಿದ್ಯಾರ್ಥಿಗಳಿಗೆ ಉಳಗಾದ ಶಾಲೆಗೆ ಬರಲು ಜಿಲ್ಲಾಧಿಕಾರಿ ಮೂಲಕ ಅನುಮತಿ ಕೊಡಿಸಲಾಗುವುದು. ಅಗತ್ಯವಿದ್ದರೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು.
– ಹರೀಶ ಗಾಂವ್ಕರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.