ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿಗಳ ಮುಖದಲ್ಲಿ ಮೂಡಿದ ಮಂದಹಾಸ

ರಾತ್ರಿ ಬೆಳಕಿನಲ್ಲಿ ರಂಗಿನಲೋಕ ಸೃಷ್ಟಿಸಿದ ಜಾತ್ರೆ
Last Updated 20 ಮಾರ್ಚ್ 2022, 14:14 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ವ್ಯಾಪಾರಿ ವರ್ಗಕ್ಕೆ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಚೇತರಿಕೆಯ ವಿಶ್ವಾಸ ಮೂಡಿಸಿದೆ.

ಸೂರ್ಯ ಮುಳುಗುತ್ತಿದ್ದಂತೆ ಜಾತ್ರೆಪೇಟೆಯ ದೃಶ್ಯ ಬದಲಾಗುತ್ತಿದೆ. ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುವ ಪೇಟೆ ಹೊಸ ಲೋಕವನ್ನು ಜನರಿಗೆ ಪರಿಚಯಿಸುತ್ತಿದೆ.

ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದೆನಿಸಿರುವ ಈ ಜಾತ್ರೆಯಲ್ಲಿ ದೇಶದ ನಾನಾ ಭಾಗಗಳಿಂದ ನೂರಾರು ವ್ಯಾಪಾರಿಗಳು ಬಂದಿದ್ದಾರೆ. ತಿಂಡಿತಿನಿಸುಗಳು, ಆಟಿಕೆಗಳು, ಮಿಠಾಯಿ, ಅಲಂಕಾರಿಕ ಸಾಮಗ್ರಿ, ಬಟ್ಟೆ ಹೀಗೆ ಹಲವು ಬಗೆಯ ಪರಿಕರಗಳ ಮಾರಾಟ ಚುರುಕಾಗಿದೆ.

ಕೋಣನಬಿಡಕಿ, ಕೋಟೆಕೆರೆಯಲ್ಲಿ ಸಂಜೆಯಾಗುತ್ತಿದ್ದಂತೆ ಝಗಮಗಿಸುವ ಬೆಳಕಿನೊಂದಿಗೆ ಅಮ್ಯೂಸಮೆಂಟ್ ಲೋಕ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಜಲಸಾಹಸ ಕ್ರೀಡೆಗೂ ಜನ ಮುಗಿಬೀಳುತ್ತಿದ್ದಾರೆ. ಜಾತ್ರೆಯ ಪೇಟೆ ಕಳೆದ ಎರಡು ದಿನಗಳಿಂದ ಜನದಟ್ಟಣೆಯಿಂದ ಕೂಡಿದ್ದು ಜೀವಕಳೆ ತುಂಬಿದೆ.

‘ಎರಡು ವರ್ಷಗಳಿಂದ ಹಲವು ಜಾತ್ರೆ, ಉತ್ಸವಗಳು ನಿಷೇಧವಾಗಿದ್ದವು. ವ್ಯಾಪಾರಿ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದವರ ಪಾಲಿಗೆ ಕರಾಳ ದಿನಗಳೇ ಅನಿವಾರ್ಯವಾಗಿತ್ತು. ಶಿರಸಿ ಜಾತ್ರೆ ಈ ನೋವನ್ನು ಮರೆಸಿದೆ. ಉತ್ತಮ ವಹಿವಾಟು ನಡೆಸುತ್ತಿದ್ದೇವೆ’ ಎಂದು ಬೊಂಬೆಗಳನ್ನು ಮಾರಾಟಕ್ಕೆ ಇಟ್ಟುಕೊಂಡಿರುವ ಕಾನ್ಪುರದ ರಫೀಕ್ ಪ್ರತಿಕ್ರಿಯಿಸಿದರು.

‘ವರ್ಷದಿಂದ ದುಡಿದಿದ್ದಷ್ಟು ಆದಾಯವನ್ನು ಜಾತ್ರೆಯ ಆರೇ ದಿನದಲ್ಲಿ ಸಂಪಾದಿಸಿದ್ದೇವೆ. ಈ ಹಿಂದಿನ ಎರಡು ಜಾತ್ರೆಗಳಲ್ಲೂ ವಹಿವಾಟು ನಡೆಸಿದ ಅನುಭವಕ್ಕಿಂತ ಈ ಬಾರಿ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ. ಜನರು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಬಿಕಾನೇರ್ ಜಿಲ್ಲೆಯಿಂದ ಬಂದಿರುವ ವ್ಯಾಪಾರಿ ಜೋಶ್ನಾ ಹೇಳಿದರು.

‘ಜಾತ್ರೆಪೇಟೆಯಲ್ಲಿ ಖಾದ್ಯ, ದಿನಬಳಕೆ ಸಲಕರಣೆ, ಅಲಂಕಾರಿಕ ಸಾಮಗ್ರಿ ಸೇರಿದಂತೆ ಬಹುತೇಕ ವಸ್ತುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಪ್ರವಾಸಿಗ ಗಿರೀಶ್ ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT