ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಆಗಸದಲ್ಲಿ ಕೌತುಕ: ಕಾರವಾರದಲ್ಲಿ ಶೇ 89ರಷ್ಟು ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರ

ಚಂದ್ರನ ನೆರಳು: ಭೂಮಿಗೆ ಕವಿದ ಕತ್ತಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸೂರ್ಯ ಮೇಲೇರುತ್ತಿದ್ದಂತೆ ಬೆಳಕು ಕಡಿಮೆಯಾಯಿತು. ಬೆಳಿಗ್ಗೆ 9.20ರ ಸುಮಾರಿಗೆ ಸಂಜೆ ಐದು ಗಂಟೆಯ ವಾತಾವರಣದಂತೆ ಗೋಚರಿಸಿತು. ಎರಡು ನಿಮಿಷಗಳ ಬಳಿಕ ಮತ್ತೆ ಎಂದಿನಂತೆ ಬಿಸಿಲು ಜೋರಾಯಿತು!

ನಗರದಲ್ಲಿ ಗುರುವಾರ ಸೂರ್ಯಗ್ರಹಣದ ಸಂದರ್ಭದಲ್ಲಿ ಕಂಡುಬಂದ ಚಿತ್ರಣವಿದು. 39 ವರ್ಷಗಳ ಬಳಿಕ ರಾಜ್ಯದ ಕರಾವಳಿಯಲ್ಲಿ ಕಾಣಿಸಿಕೊಂಡ ಕಂಕಣ ಸೂರ್ಯಗ್ರಹಣವು ನಗರದಲ್ಲೂ ಕುತೂಹಲಕ್ಕೆ ಕಾರಣವಾಯಿತು. ಬೆಳಿಗ್ಗೆ 8 ಗಂಟೆ 3 ನಿಮಿಷಕ್ಕೆ ಗ್ರಹಣ ಆರಂಭವಾಗುತ್ತಿದ್ದಂತೆ ಚಂದ್ರನ ನೆರಳು ಭೂಮಿಯನ್ನು ನಿಧಾನಕ್ಕೆ ಆವರಿಸಲಾರಂಭಿಸಿತು. ಬೆಳಿಗ್ಗೆ 9.24ಕ್ಕೆ ಗರಿಷ್ಠ, ಶೇ 89ರಷ್ಟು ಪ್ರಮಾಣದಲ್ಲಿ ಗೋಚರಿಸಿತು. ವಿದ್ಯಾರ್ಥಿಗಳು ಸೂರ್ಯಗ್ರಹಣದ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ದಾಖಲಿಸಿಕೊಂಡು ನೆರಳಿನ ಪ್ರಮಾಣವನ್ನು ಲೆಕ್ಕಾಚಾರ ಹಾಕಿದರು.

ಆಕಾಶದ ಈ ವಿಸ್ಮಯವನ್ನು ನೋಡಲು ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ನೆಹರೂ ತಾರಾಲಯದಿಂದ ತರಿಸಲಾಗಿದ್ದ ಸನ್ ಪ್ರೊಜೆಕ್ಟರ್, ಪಿನ್ ಹೋಲ್ ಕ್ಯಾಮೆರಾಗಳಲ್ಲಿ ಸೂರ್ಯಗ್ರಹಣದ ಚಿತ್ರಣ ಕಾಣಿಸಿಕೊಂಡಿತು. ಗ್ರಹಣ ವೀಕ್ಷಣೆಗೆಂದೇ ಇರುವ ವಿಶೇಷ ಕನ್ನಡಕಗಳನ್ನು ಧರಿಸಿ ನೋಡಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಳಕಿತರಾದರು. 

ಧಾರ್ಮಿಕ ಆಚರಣೆಗಳು: ಸೂರ್ಯಗ್ರಹಣದ ಬಳಿಕ ಹಲವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ನೀರು, ಉಪಾಹಾರ ಸೇವಿಸದೇ ಸಂಪ್ರದಾಯ ಪಾಲಿಸಿದರು. ಗ್ರಹಣದ ಬಳಿಕ ಸಮುದ್ರದಲ್ಲಿ ಸ್ನಾನ ಮಾಡಿದರು. ನಗರದ ಹಲವು ಅಂಗಡಿ, ಹೋಟೆಲ್‌ಗಳು ಗ್ರಹಣ ಮುಕ್ತಾಯ ಆಗುವವರೆಗೆ ಬಾಗಿಲು ಹಾಕಿದ್ದವು.

ನಗರದ ನ್ಯೂ ಹೈಸ್ಕೂಲ್, ಬಾಲಮಂದಿರ, ಸೇಂಟ್ ಮೈಕಲ್ಸ್ ಕಾನ್ವೆಂಟ್, ಸೇಂಟ್ ಜೋಸೆಫ್, ಹಿಂದೂ ಹೈಸ್ಕೂಲ್, ಸ್ವಾಮಿ ವಿವೇಕಾನಂದ, ಸುಮತಿ ದಾಮ್ಲೆ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ವಿಜ್ಞಾನ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.

ಗ್ರಹಣ ವೀಕ್ಷಣೆಗೆ ನಿರಾಸಕ್ತಿ: ಅಪರೂಪದ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಅಷ್ಟಾಗಿ ಆಸಕ್ತಿ ತೋರದಿರುವುದು ಕಂಡುಬಂತು.

ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಿಂದಿನ ಬಾರಿ ಚಂದ್ರಗ್ರಹಣವನ್ನು 3,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಆದರೆ, ಕಂಕಣ ಸೂರ್ಯಗ್ರಹಣ ನೋಡಲು 100 ಜನರ ಆಸುಪಾಸಿನಲ್ಲಿ ಸೇರಿದ್ದರು. ಕೆಲವು ದಿನಗಳ ಮೊದಲೇ ಪ್ರಚಾರ ಮಾಡಿದ್ದರೂ ಜನರು ಬರಲಿಲ್ಲ.

ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂದು ವಿಜ್ಞಾನ ಕೇಂದ್ರದ ಸಿಬ್ಬಂದಿ ನಿರೀಕ್ಷಿಸಿದ್ದರು. ಆದರೆ, ಬೆರಳೆಣಿಕೆಯ ವಿದ್ಯಾರ್ಥಿಗಳಿದ್ದರು. ‘ಮಕ್ಕಳಿಗೆ ಸೂರ್ಯಗ್ರಹಣ ವೀಕ್ಷಿಸದಿರಲು ಶಾಲೆಗಳಲ್ಲಿ ಸೂಚನೆ ನೀಡಿದ್ದಾರೆ. ರಜೆ ಇಲ್ಲದಿದ್ದರೂ ಶಾಲಾ ವಾಹನಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಿತ್ತು’ ಎಂದು ವಿದ್ಯಾರ್ಥಿನಿಯೊಬ್ಬಳು ದೂರಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು