ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ದಿನ ಬಂಕರ್‌ನಲ್ಲೇ ವಾಸ್ತವ್ಯ: ಸಂಕಷ್ಟ ವಿವರಿಸಿದ ವಿದ್ಯಾರ್ಥಿನಿ

ಹಾರ್ಕಿವ್‌ನಿಂದ ಸುರಕ್ಷಿತವಾಗಿ ಮರಳಿದ ಮುಂಡಗೋಡದ ನಾಜಿಲ್ಲಾ ಗಾಜಿಪೂರ
Last Updated 7 ಮಾರ್ಚ್ 2022, 15:40 IST
ಅಕ್ಷರ ಗಾತ್ರ

ಮುಂಡಗೋಡ: ‘ಒಂದು ತಿಂಗಳ ಹಿಂದೆಯಷ್ಟೇ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‌ನ ಹಾರ್ಕಿವ್‌ ನಗರಕ್ಕೆ ಹೋಗಿದ್ದೆ. ಆದರೆ, ಅಷ್ಟರಲ್ಲೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿ, ಸ್ವದೇಶಕ್ಕೆ ಮರಳುತ್ತೇವೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ..’

ಹಾರ್ಕಿವ್‌ನಿಂದ ಸೋಮವಾರ ಹುಬ್ಬಳ್ಳಿಗೆ ಬಂದಿಳಿದಿರುವ, ಇಲ್ಲಿನ ಕಿಲ್ಲೆ ಓಣಿಯ ನಿವಾಸಿ, ವಿದ್ಯಾರ್ಥಿನಿ ನಾಜಿಲ್ಲಾ ಗಾಜಿಪೂರ ವಿಷಾದದಿಂದ ಹೀಗೆ ಹೇಳಿದರು.

‘ಯುದ್ಧ ಆರಂಭವಾದಾಗ ಮೊದಲ ಎರಡು ದಿನ ಹೇಳಿಕೊಳ್ಳುವಂತಹ ಕಷ್ಟವಾಗಲಿಲ್ಲ. ಆದರೆ, ನಂತರದ ದಿನಗಳಲ್ಲಿ ಕತ್ತಲಿನಲ್ಲಿ ಬಂಕರ್‌ಗಳಲ್ಲಿ ಜೀವನ ಕಳೆಯಬೇಕಾಯಿತು’ ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪುತ್ರಿ ನಾಜಿಲ್ಲಾ ಅವರನ್ನು ಪಾಲಕರು ಸೋಮವಾರ ಆತ್ಮೀಯವಾಗಿ ಬರಮಾಡಿಕೊಂಡರು. ‘ಟೈಲರಿಂಗ್‌ ಕೆಲಸ ಮಾಡುತ್ತಿರುವ ತಂದೆಯು, ಬಹಳ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣ ಕೊಡಿಸಲು ಉಕ್ರೇನ್‌ಗೆ ಕಳಿಸಿದ್ದರು. 400 ವಿದ್ಯಾರ್ಥಿಗಳು ಒಂದು ಬಂಕರ್‌ನಲ್ಲಿ ವಾಸವಾಗಿದ್ದೆವು. ಎಂಟು ದಿನ ಅಲ್ಲದೇ ಇದ್ದೆವು. ರಾತ್ರಿ ಬೆಳಕು ಕಾಣಬಾರದೆಂದು ಬಂಕರ್‌ನಲ್ಲಿ ಬಲ್ಬ್ ಆಫ್ ಮಾಡಲಾಗುತ್ತಿತ್ತು. ಮೊಬೈಲ್‌ ಫೋನ್‌ ಆಫ್ ಮಾಡಲು ಸಹ ಸೂಚನೆ ನೀಡುತ್ತಿದ್ದರು’ ಎಂದು ವಿವರಿಸಿದರು.

‘ಒಂದೇ ಬಂಕರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದುದರಿಂದ, ಕೆಲವೊಮ್ಮೆ ನೀರು, ಆಹಾರದ ಸಮಸ್ಯೆ ಆಗುತ್ತಿತ್ತು. ಬಂಕರ್‌ನಿಂದ ಹೊರಬಂದು ಸುರಕ್ಷಿತ ನಗರದತ್ತ ತೆರಳಲು ಶಿಕ್ಷಕರು ಹೆಚ್ಚು ಸಹಾಯ ಮಾಡಿದರು’ ಎಂದರು.

‘ನಗರದಲ್ಲಿ ಪರಿಸ್ಥಿತಿ ಗಂಭೀರವಾದಾಗ ಬಂಕರ್‌ನಿಂದ ಹೊರಬಂದು, 2– 3 ತಾಸು ರೈಲು ನಿಲ್ದಾಣದಲ್ಲಿ ಕಾದು, ಮುಂದೆ 24 ತಾಸುಗಳ ಪ್ರಯಾಣ ಮಾಡಿದೆವು. ಪ್ರಯಾಣದುದ್ದಕ್ಕೂ ಅಲ್ಲಲ್ಲಿ ಬಾಂಬ್‌ ದಾಳಿಗಳು ಕಾಣುತ್ತಿದ್ದವು. ಕೀವ್‌ನಲ್ಲಿ ಮೂರು ತಾಸು ಉಳದುಕೊಂಡು, ಮುಂದಿನ ನಗರದತ್ತ ಸಾಗಿದೆವು. ಕೀವ್‌ ತಲುಪುವವರೆಗೂ ನೀರು, ಆಹಾರ ಏನೂ ಸಿಗಲಿಲ್ಲ’ ಎಂದರು.

‘ವಿದ್ಯಾರ್ಥಿಗಳೇ ಗುಂಪು ರಚಿಸಿಕೊಂಡು, ಬಸ್‌ ಮಾಡಿಕೊಂಡು, ಹಂಗೇರಿ ಗಡಿಯವರೆಗೆ ಬಂದೆವು. ಹಂಗೇರಿ ಗಡಿ ದಾಟಲು ಇಡಿ ಒಂದು ದಿನ ಅಲ್ಲೇ ಉಳಿದುಕೊಂಡೆವು. ನಂತರ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಬಂದು, ಆಹಾರ, ನೀರು ಹಾಗೂ ವಾಸ್ತವ್ಯಕ್ಕೆ ಹೋಟೆಲ್‌ ವ್ಯವಸ್ಥೆ ಮಾಡಿದರು’ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

‘ಇಲ್ಲೇ ಅವಕಾಶ ಕೊಡಿ‌’:

‘ಪಾಲಕರು ತುಂಬಾ ಕಷ್ಟಪಟ್ಟು, ಕಲಿಸಲು ಲಕ್ಷಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಮುಂದೆ ಆ ಹಣ ಸಿಗುತ್ತೋ ಇಲ್ಲವೋ ಎಂಬುದು ಗೊತ್ತಿಲ್ಲ. ಅಲ್ಲಿನ ವಿಶ್ವವಿದ್ಯಾಲಯದಿಂದ ಏನೂ ಭರವಸೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ, ನಮ್ಮಂತಹ ಬಡಕುಟುಂಬಗಳ ನೆರವಿಗೆ ಬರಬೇಕು. ಇಲ್ಲಿಯೇ ಕಲಿಯಲು ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ನಾಜಿಲ್ಲಾ ಗಾಜಿಪೂರ ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT