ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯ ಅನುಭವ ಪಡೆದ ಮಕ್ಕಳು

ಕುಂಬಾರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ
Last Updated 12 ಜುಲೈ 2019, 13:09 IST
ಅಕ್ಷರ ಗಾತ್ರ

ಜೊಯಿಡಾ: ಆ ಶಾಲೆಯ ತುಂಬ ‘ಮತದಾರ’ರು. ತಮ್ಮಮತ ಯಾರಿಗೆ ಎಂಬ ಗುಟ್ಟು ಬಿಟ್ಟುಕೊಡದೇ ನಡೆದ ಶಾಂತಿಯುತ ಮತದಾನ.ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾದ ಬಳಿಕ ಮತ ಎಣಿಕೆ ನಡೆದು, ವಿಜೇತರ ಹೆಸರು ಪ್ರಕಟಿಸಲಾಯಿತು.

– ಲೋಕಸಭಾ ಚುನಾವಣೆಯ ಮಾದರಿಯಲ್ಲೇ ಶಾಲಾ ಸಂಸತ್ತಿಗೆ ಶುಕ್ರವಾರ ಚುನಾವಣೆ ನಡೆದಿದ್ದು ತಾಲ್ಲೂಕಿನ ಕುಂಬಾರವಾಡಾ ಸರ್ಕಾರಿ ಪ್ರೌಢಶಾಲೆಯಲ್ಲಿ.

ವಿವಿಧ ರೀತಿಯ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಗಮನ ಸಳೆಯುತ್ತಿರುವ ಈ ಶಾಲೆಯಲ್ಲಿ ನಡೆದ ಪ್ರಸಕ್ತಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಅನುಭವ ಪಡೆದು, ಅದರ ಮಹತ್ವವನ್ನು ಅರಿತುಕೊಂಡರು.

ಚುನಾವಣೆಗೆ ಒಂದು ವಾರ ಮುಂಚಿತವಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ನಿಗದಿಪಡಿಸಿ, ಪರಿಶೀಲನೆ ನಡೆಸಿ, ನಾಮಪತ್ರ ಹಿಂತೆಗೆತಕ್ಕೂ ಅವಕಾಶ ಕಲ್ಪಿಸಲಾಗಿತ್ತು. ನಂತರ ಚುನಾವಣಾ ಪ್ರಚಾರಕ್ಕೆ ಎರಡು ದಿನಗಳ ಅವಕಾಶ ನೀಡಲಾಗಿತ್ತು. ಚುನಾವಣಾ ದಿನದ 24 ಗಂಟೆಗಳ ಮೊದಲು ಪ್ರಚಾರ ನಿಲ್ಲಿಸುವಂತೆ ಸೂಚಿಸಲಾಗಿತ್ತು.

ಪ್ರತೀ ಅಭ್ಯರ್ಥಿಯ ಚುನಾವಣಾ ಚಿಹ್ನೆಯನ್ನು ಮತಪತ್ರದಲ್ಲಿ ನೀಡಿ, ಮತದಾರರಿಗೆ ‘ನೋಟಾ’ದ ಅವಕಾಶವನ್ನೂ ಕಲ್ಪಿಸಲಾಗಿತ್ತು. ಮತದಾರರ ನೋಂದಣಿ ಪುಸ್ತಕದಲ್ಲಿಸಹಿ ಪಡೆಯುವುದು, ಅಳಿಸಲಾಗದ ಶಾಯಿಯನ್ನು ಬೆರಳಿಗೆ ಹಚ್ಚುವುದು ಮೊದಲಾದ ಚುನಾವಣಾ ವಿಧಾನಗಳನ್ನು ಪಾಲಿಸಲಾಗಿತ್ತು.ಭದ್ರತಾ ವ್ಯವಸ್ಥೆಯ ನಡುವೆಮಕ್ಕಳು ಸಾಲಾಗಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಶಾಲಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ 20 ವಿವಿಧ ಇಲಾಖೆಗಳ ಸ್ಥಾನಕ್ಕೆ ಒಟ್ಟು 30 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲೆಯ ಒಟ್ಟು 150 ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡಿಕೊಂಡರು. ನಂತರ ಚುನಾವಣಾಧಿಕಾರಿ ವಿಜೇತರಿಗೆಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.ವಿಜೇತರು ಶಾಲಾ ಸಚಿವ ಸಂಪುಟವನ್ನು ರಚಿಸಿ ಖಾತೆ ಹಂಚಿಕೆ ಮಾಡಿದರು. ಜೊತೆಯಲ್ಲೇ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ನಡೆಯಿತು.

ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ಮಂಜುನಾಥ ಅಸುಂಡಿ, ಪ್ರಶಾಂತ.ಜಿ.ಎನ್, ಜೋಸೆಫ್ಗೋನ್ಸಾಲ್ವೆಸ್ ಹಾಗೂ ಜಾಗೃತಿ ಕಾರ್ಯನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಿ.ಬಿ.ಪಾಟೀಲ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT