ಭಾನುವಾರ, ಆಗಸ್ಟ್ 18, 2019
25 °C
ಸಾಹಸ ಕ್ರೀಡೆಯಲ್ಲಿ ಪಳಗುತ್ತಿರುವ ಹಳಿಯಾಳದ ವಿದ್ಯಾರ್ಥಿಗಳು

ಟೇಕ್ವಾಂಡೊ ರಾಜ್ಯಮಟ್ಟದ ಸ್ಪರ್ಧೆಗೆ ಅಣಿ

Published:
Updated:
Prajavani

ಹಳಿಯಾಳ: ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಮುಂತಾದ ಒಂದಷ್ಟು ಜನಪ್ರಿಯ ಕ್ರೀಡೆಗಳನ್ನಷ್ಟೇ ಕಂಡಿದ್ದ ಪಟ್ಟಣಕ್ಕೆ ಟೇಕ್ವಾಂಡೊದ ಪರಿಚಯ ಇರಲಿಲ್ಲ. ಈ ಭಾಗಕ್ಕೆ ಹೊಸದಾದ ಆಟವನ್ನು ತಮ್ಮದಾಗಿಸಿಕೊಂಡ ಪುಟ್ಟ ಬಾಲಕ, ಬಾಲಕಿಯರು ರಾಜ್ಯಮಟ್ಟದ ಸ್ಪರ್ಧೆಗೆ ಅಣಿಯಾಗಿದ್ದಾರೆ.

ಇಲ್ಲಿನ ಸಂದೀಪ ಫಾಕ್ರೇನ್ನವರ ಅವರು ಮಕ್ಕಳಿಗೆ ಈ ಸಾಹಸ ಕ್ರೀಡೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ತಮ್ಮ ಸಂದೀಪ ಅಕಾಡೆಮಿಯ ಮೂಲಕ ಕ್ರೀಡೆಯ ಪಟ್ಟುಗಳನ್ನು ಹೇಳಿಕೊಡಲು ಆರಂಭಿಸಿದರು. ಆರಂಭದಲ್ಲಿ ಐವರು ಮಕ್ಕಳಿಂದ ಆರಂಭವಾದ ಈ ಅಕಾಡೆಮಿಯಲ್ಲಿ ಈಗ 25 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ನಿರಂತರ ತರಬೇತಿಯ ಫಲವು ಧಾರವಾಡದಲ್ಲಿ ಈಚೆಗೆ ನಡೆದ  ‘ಓಪನ್ ಆ್ಯಕ್ಷನ್ ಟೇಕ್ವಾಂಡೊ ಚಾಂಪಿಯನ್‍ಷಿಪ್ 2019’ರಲ್ಲಿ ಕಂಡುಬಂತು. 21 ಮಕ್ಕಳು ಹಲವು ಬಹುಮಾನಗಳನ್ನು ಹಾಗೂ ಪದಕಗಳನ್ನು ಜಯಿಸಿದರು. ಈ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡರು.

‘ಆ.8ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 37ನೇ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಕೆಡೆಟ್ ಚಾಂಪಿಯನ್‍ಷಿಪ್‍ನ ಟೇಕ್ವಾಂಡೋಡೊ ಸ್ಪರ್ಧೆ ಆಯೋಜನೆಗೊಂಡಿದೆ. ಅದರಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಕ್ರೀಡಾಪಟುಗಳಿಗೆ ಹೆಚ್ಚಿನ ಸಹಾಯ, ಸೌಲಭ್ಯ ಒದಗಿಸಲಾಗುವುದು’ ಎಂದು ಟೇಕ್ವಾಂಡೊ ಅಕಾಡೆಮಿಯ ಮಾರ್ಗದರ್ಶಕರಾದ ಅಪ್ಪು ಚರಂತಿಮಠ ಹಾಗೂ ಶೀತಲ್ ಅಗಸಿಮನಿ ತಿಳಿಸಿದರು.

‘ವಿರಕ್ತ ಮಠದ ಆವರಣದಲ್ಲಿ ದಿನವೂ ಸಾಯಂಕಾಲ ಟೇಕ್ವಾಂಡೊ ತರಬೇತಿ ನೀಡಲಾಗುತ್ತಿದೆ. ವಿ.ವಿ.ಡಿ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲೂ ವಾರಕ್ಕೆ ಎರಡು ದಿನ ಈ ಕ್ರೀಡೆಯನ್ನು ಕಲಿಸಲಾಗುತ್ತಿದೆ. ಟೇಕ್ವಾಂಡೋ ಕಲಿಯುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಆಗುತ್ತದೆ. ಇದು ಒಲಿಂಪಿಕ್ ಕೂಟದಲ್ಲೂ ಸ್ಥಾನ ಪಡೆದಿದೆ’ ಎಂದು ತರಬೇತುದಾರ ಸಂದೀಪ ಫಾಕ್ರೇನ್ನವರ ಹೇಳಿದರು.

ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ಟೇಕ್ವಾಂಡೊ ಶ್ರೇಣಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಈಗಾಗಲೇ ಮಕ್ಕಳು ಟೇಕ್ವಾಂಡೊದ ಕುರಿಯೋಗಿ, ಪುಮ್ಸೆ ಮತ್ತು ಸೈರಿಂಗ್ ವಿಭಾಗದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

Post Comments (+)