ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರವೇಶಾತಿಗೂ ಕೊರೊನಾ ಭೀತಿ

ಊರೂರು ಸುತ್ತಿದರೂ ವಿದ್ಯಾರ್ಥಿಗಳಿಲ್ಲ!
Last Updated 18 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಬಸ್ ನಿಲ್ದಾಣದ ಮುಂಭಾಗ, ಪ್ರಮುಖ ರಸ್ತೆಗಳ ಬದಿಯಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಕಾಲೇಜು ಪ್ರವೇಶ ಆರಂಭದ ಬ್ಯಾನರ್ ಅಳವಡಿಸಲಾಗಿದೆ. ಕಾಲೇಜಿನ ಸಿಬ್ಬಂದಿಯೇ ಊರೂರು ತಿರುಗಿ, ವಿದ್ಯಾರ್ಥಿಗಳ ಮನವೊಲಿಸುತ್ತಿದ್ದಾರೆ.

ಪರ ಊರಿನಿಂದ ಬಂದು ಕಲಿಯುವ ವಿದ್ಯಾರ್ಥಿಗಳು ಕೊರೊನಾ ಭೀತಿಯಿಂದ ಪ್ರವೇಶಾತಿ ಪಡೆದುಕೊಳ್ಳಲು ಹಿಂದೇಟು ಹಾಕಿದ್ದೇ ಇದಕ್ಕೆ ಕಾರಣ ಎಂದು ಬೋಧಕ ಸಿಬ್ಬಂದಿ ವಿಶ್ಲೇಷಿಸುತ್ತಾರೆ. ಇದೇ ಮೊದಲ ಬಾರಿಗೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸುತ್ತಲಿನ ಊರುಗಳಿಗೆ ತೆರಳಿ, ಪ್ರವೇಶಾತಿ ಆರಂಭದ ಬಗ್ಗೆ ಬ್ಯಾನರ್ ಕಟ್ಟಿ, ಭಿತ್ತಿಪತ್ರ ಹಂಚಿದ್ದಾರೆ. ಆದರೂ ಕೋವಿಡ್ ಭಯದಿಂದ ಮಕ್ಕಳನ್ನು ವಸತಿನಿಲಯದಲ್ಲಿ ಇಟ್ಟು ಕಲಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.

‘ನಾಲ್ಕು ವಿಭಾಗಗಳಲ್ಲಿ ಒಟ್ಟು 252 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಪ್ರಥಮ ವರ್ಷದ ಪ್ರವೇಶಕ್ಕೆ ಇಲ್ಲಿಯವರೆಗೆ ಶೇ 12ರಷ್ಟು ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಮಾಡಿದ್ದಾರೆ. ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಿಗೆ ಕಲಿಯಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ಬಿ.ಸಿ.ಎಂ ವಸತಿ ನಿಲಯದ ಸೌಲಭ್ಯವಿದೆ. ಕರಗಿನಕೊಪ್ಪದಲ್ಲಿ ಹೊಸ ಕಟ್ಟಡವೂ ಸಜ್ಜಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ಎಂ.ಬಿ.ಹುಡೇದ.

ಸ್ವಂತ ಖರ್ಚಿನಲ್ಲಿ ಪ್ರಚಾರ:ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಶಿಗ್ಗಾವಿ, ಬಂಕಾಪುರ, ಸವಣೂರು, ಯಲ್ಲಾಪುರ, ಶಿರಸಿ, ಕಿರವತ್ತಿ, ಕಲಘಟಗಿ, ಹಾನಗಲ್ ಸೇರಿದಂತೆ ಇತರೆಡೆ ತೆರಳಿ, ದಾಖಲಾತಿಯ ಪ್ರಚಾರ ಮಾಡಿದ್ದಾರೆ. ಕೆಲವು ಪ್ರೌಢಶಾಲೆಗಳಿಗೆ ತೆರಳಿ ಭಿತ್ತಿಪತ್ರ ನೀಡಿದ್ದಾರೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂದೇಶವಿರುವ ವಿಡಿಯೊ ಮಾಡಿ, ಸಾಮಾಜಿಕ ತಾಣದಲ್ಲಿಯೂ ಪ್ರಚಾರ ಮಾಡಿದ್ದಾರೆ.

‘ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಫೋನ್ ಕರೆ ಮಾಡಿ ದಾಖಲಾತಿ ಮಾಡಿಕೊಳ್ಳುವಂತೆ ಕೇಳಲಾಗಿದೆ. ಕೋವಿಡ್ ಭಯ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಈ ವರ್ಷ ಕಾಲೇಜು ಕಲಿಯದಿದ್ದರೂ ಪರವಾಗಿಲ್ಲ. ಬೇರೆ ಊರಿಗೆ ಕಳಿಸುವುದಿಲ್ಲ. ಇದ್ದ ಊರಿನಲ್ಲಿಯೇ ಪಿ.ಯು.ಸಿ ಕಲಿಸುತ್ತೇವೆ ಎಂದು ಕೆಲವು ಪಾಲಕರು ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಹೇಳಿದರು.

ಸೆ. 19 ಕೊನೆಯ ದಿನ:ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.19 ಕೊನೆಯ ದಿನವಾಗಿದೆ. ಎರಡನೇ ಮುಂದುವರಿದ ಸುತ್ತು ಇದಾಗಿದ್ದು, ಅರ್ಹ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತೆ ಪ್ರಾಚಾರ್ಯಎಂ.ಬಿ.ಹುಡೇದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT