ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣವಲ್ಲಿಯಲ್ಲಿ ಯಕ್ಷೋತ್ಸವ ಸೆ.6ರಿಂದ

ಕೊನೆಯ ದಿನ ಯಕ್ಷಗಾನ ಬ್ಯಾಲೆ ಪ್ರದರ್ಶನ
Last Updated 31 ಆಗಸ್ಟ್ 2019, 9:30 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಠದ ಅಂಗ ಸಂಸ್ಥೆಯಾಗಿರುವ ಯಕ್ಷಶಾಲ್ಮಲಾ ವತಿಯಿಂದ ಸೆ.6ರಿಂದ 8ರವರೆಗೆ ಸ್ವರ್ಣವಲ್ಲಿ ಮಠದಲ್ಲಿ ಯಕ್ಷೋತ್ಸವ ಆಯೋಜಿಸಲಾಗಿದೆ.

ಕಾರ್ಯಕ್ರಮ ಸಂಘಟಕರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ತಾಳಮದ್ದಲೆ ಸ್ಪರ್ಧೆ, ಯಕ್ಷಗಾನ ಪ್ರದರ್ಶನ, ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸೆ.6ರ ಸಂಜೆ 4 ಗಂಟೆಗೆ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶ್ಯಾಮ ಭಟ್ಟ, ಮುಂಬೈ ಬಾಬಾ ಅಣು ಶಕ್ತಿ ಕೇಂದ್ರದ ನಿವೃತ್ತ ಅಧಿಕಾರಿ ವಿ.ಆರ್.ಭಟ್ಟ ಪಾಲ್ಗೊಳ್ಳುವರು. ಇದೇ ವೇಳೆ ಯಕ್ಷಗಾನದ ಹಿರಿಯ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಹಾಗೂ ನಾಗೇಶ ನಾಯ್ಕ ಮಿರ್ಜಾನ್ ಅವರನ್ನು ಸನ್ಮಾನಿಸಲಾಗುವುದು. ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಬರೆದ ‘ಶಂಕರ ವಿಜಯ’ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಜ್ವಾಲಾ ಪ್ರತಾಪ’ ಯಕ್ಷಗಾನ ಆಖ್ಯಾನ ಪ್ರದರ್ಶನಗೊಳ್ಳಲಿದೆ. ಸೆ.7ರ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಮಕ್ಕಳ ತಾಳಮದ್ದಲೆ ಸ್ಪರ್ಧೆ, ನಂತರ ಸಾಗರ ಹೊಸೂರು ಭಾರತಿ ಕಲಾ ಪ್ರತಿಷ್ಠಾನದ ಸದಸ್ಯರಿಂದ ‘ರಾವಣ ವಧೆ’ ಯಕ್ಷಗಾನ, ಸೆ.8ರ ಬೆಳಿಗ್ಗೆ 10ರಿಂದ ಮತ್ತೆ ತಾಳಮದ್ದಲೆ ಸ್ಪರ್ಧೆ ಸಂಜೆ 5ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ಕಲಾವಿದರಾದ ಸೀತಾರಾಮ ಹೆಗಡೆ ಹೊಸ್ತೋಟ, ಸುಬ್ರಾಯ ಭಾಗವತ ಕವಾಳೆ ಅವರನ್ನು ಸನ್ಮಾನಿಸಲಾಗುತ್ತದೆ. ಹಿರಿಯ ಭಾಗವತ ಹೊಸ್ತೋಟ ಮಂಜುನಾಥ ಭಾಗವತ, ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಗ್ರಾಮೀಣ ಅಭಿವೃದ್ಧಿ ತಜ್ಞ ಪ್ರಕಾಶ ಭಟ್ ಭಾಗವಹಿಸುವರು ಎಂದು ತಿಳಿಸಿದರು.

ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದ ‘ಯಕ್ಷ ಸೌರಭ’ ಮಕ್ಕಳಿಂದ ಸುದರ್ಶನ ವಿಜಯ ಯಕ್ಷಗಾನ, ರಾತ್ರಿ 7.30ಕ್ಕೆ ಡಾ. ಶಿವರಾಮ ಕಾರಂತ ನಿರ್ದೇಶಿತ ಯಕ್ಷಗಾನದ ಬ್ಯಾಲೆ ‘ಚಿತ್ರಾಂಗದ’ ವನ್ನು ಬೆಂಗಳೂರಿನ ಕರ್ನಾಟಕ ಕಲಾ ದರ್ಶನಿ ತಂಡದವರು ಪ್ರದರ್ಶಿಸುವರು. ಸಂಘಟನೆ ಪ್ರಮುಖರಾದ ಎಂ.ಎ.ಹೆಗಡೆ ದಂಟ್ಕಲ್, ಆರ್.ಎಸ್.ಹೆಗಡೆ ಭೈರುಂಬೆ, ನಾಗರಾಜ ಜೋಶಿ, ಜಿ.ಜಿ.ಹೆಗಡೆ ಕನೇನಳ್ಳಿ, ವಿ.ಎನ್.ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT