ಬುಧವಾರ, ಏಪ್ರಿಲ್ 21, 2021
23 °C
ಗೊಂದಲ ಮೂಡಿಸುವ ದ್ವಿಮುಖ ಸಂಚಾರ, ಕಾಲುದಾರಿಗಳಲ್ಲಿ ನುಗ್ಗುವ ವಾಹನಗಳು

ಕಾರವಾರ: ಪ್ರವಾಸಿ ಸ್ನೇಹಿ ಪ್ರವೇಶದ್ವಾರದ ನಿರೀಕ್ಷೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಪ್ರವೇಶ ಕಲ್ಪಿಸುವ ಪ್ರದೇಶವು ಗೊಂದಲದ ಗೂಡಾಗಿದೆ. ಎರಡೂ ರಸ್ತೆಗಳಿಂದ ವಾಹನ ಸವಾರರು ಅನಿಯಂತ್ರಿತವಾಗಿ ಪ್ರವೇಶಿಸುತ್ತಿರುವುದು ಎದುರು ಬದಿಗಳಿಂದ ಬರುವವರನ್ನು ತಬ್ಬಿಬ್ಬುಗೊಳಿಸುತ್ತಿದೆ. ಹೀಗಾಗಿ ಇಲ್ಲಿನ ಪ್ರವೇಶದ್ವಾರದ ಕಾಮಗಾರಿಯ ನಂತರವಾದರೂ ಈ ಪ್ರದೇಶ ಪ್ರವಾಸಿ ಸ್ನೇಹಿಯಾಗಿ ಬದಲಾಗುವ ನಿರೀಕ್ಷೆ ಹಲವರದ್ದಾಗಿದೆ.

ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿನ ಕಡಲತೀರದ ಸ್ವಾಗತ ಕಮಾನು ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಈಚೆಗೆ ಭೂಮಿಪೂಜೆ ನೆರವೇರಿಸಿದ್ದರು. ಎಲ್ಲವೂ ಯೋಜನೆಯ ಪ್ರಕಾರವೇ ನಡೆದರೆ, ಈ ಪ್ರದೇಶವು ಮತ್ತೊಮ್ಮೆ ತನ್ನ ವೈಭವ ಪಡೆದುಕೊಳ್ಳಲಿದೆ. ಕಮಾನಿನೊಂದಿಗೆ ರಸ್ತೆಯ ಒಂದು ಬದಿಯಲ್ಲಿ ಸುರಕ್ಷತೆಗಾಗಿ ಬೇಲಿಯನ್ನೂ ನಿರ್ಮಿಸಲಾಗುತ್ತದೆ.

‘ಈ ಭಾಗದಲ್ಲಿ ಕಾಮಗಾರಿ ಬೇಗ ಮುಗಿದಷ್ಟೂ ಒಳ್ಳೆಯದು. ಈಗ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದ್ದು, ಕಡಲತೀರಕ್ಕೆ ಸಾಗುವ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಎರಡೂ ಕಡೆಯ ರಸ್ತೆಗಳಲ್ಲಿ ಬರುವ ಹಲವು ವಾಹನಗಳು, ದ್ವಿಚಕ್ರ ವಾಹನಗಳು ರಸ್ತೆಗಳ ಮಧ್ಯೆ ಇರುವ ಇಕ್ಕಟ್ಟಾದ ದಾರಿಯಲ್ಲಿ ಸಾಗುತ್ತಿವೆ. ಇದರಿಂದ ಎದುರಿನಿಂದ ಬರುವ ವಾಹನ ಸವಾರರು ಗೊಂದಲಕ್ಕೀಡಾಗುತ್ತಾರೆ. ಹಾಗಾಗಿ ಇಲ್ಲಿ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕು’ ಎನ್ನುವುದು ಸ್ಥಳೀಯರಾದ ಜಗನ್ನಾಥ ಅವರ ಒತ್ತಾಯವಾಗಿದೆ.

ಕಡಲತೀರಕ್ಕೆ ಹೋಗುವ ವಾಹನಗಳು ಮರಳಿನ ದಿಣ್ಣೆಗಳಲ್ಲಿ ಸಿಲುಕಿಕೊಳ್ಳುತ್ತಿವೆ. ಹಾಗಾಗಿ ಅಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಫಲಕವನ್ನು ಅಳವಡಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಭಾಗವಾಗಿ ಇಲ್ಲಿ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿ, ಈ ಹಿಂದೆ ಕಡಲತೀರದಲ್ಲಿದ್ದ ಪ್ರವೇಶ ದ್ವಾರ, ಸಮೀಪದಲ್ಲಿದ್ದ ರವೀಂದ್ರನಾಥ ಟ್ಯಾಗೋರ್ ಅವರ ಕಂಚಿನ ಪ್ರತಿಮೆಯನ್ನು ತೆರವು ಮಾಡಲಾಗಿತ್ತು. ಈಗ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು, ಅರ್ಧ ನಿರ್ಮಾಣವಾದ ಫ್ಲೈ ಓವರ್ ಮತ್ತು ಅದರ ಕಂಬಗಳು ಈ ಪ್ರದೇಶದ ಸೌಂದರ್ಯ ಕಡಿಮೆ ಮಾಡಿವೆ.

ಇಲ್ಲಿ ಪ್ರವೇಶದ್ವಾರ, ಟ್ಯಾಗೋರ್ ಅವರ ಪುತ್ಥಳಿಯ ಮರುಸ್ಥಾಪನೆ, ಐ.ಎನ್.ಎಸ್ ಚಾಪಲ್ ಯುದ್ಧ ನೌಕೆ ವಸ್ತು ಸಂಗ್ರಹಾಲಯದಿಂದ ಮಕ್ಕಳ ಉದ್ಯಾನದವರೆಗೆ ಬೇಲಿ ನಿರ್ಮಾಣ ಆಗಲಿದೆ. 

ಪ್ರವೇಶ ದ್ವಾರದ ಕಾಮಗಾರಿ

19.6 ಮೀಟರ್ - ಮುಖ್ಯ ದ್ವಾರದ ಅಗಲ

5.2, 4.6 ಮೀಟರ್ - ಸಣ್ಣ ಗೇಟುಗಳ ಅಗಲ

26.7 ಮೀಟರ್ - ಪ್ರವೇಶದ್ವಾರದ ಎತ್ತರ

40.2 ಮತ್ತು 33.8 ಮೀಟರ್ - ಪ್ರವೇಶದ್ವಾರದ ಎರಡು ಬದಿಯ ಗೋಡೆಗಳ ಉದ್ದ

ಯೋಜನೆಯ ವೆಚ್ಚ

₹ 32.60 ಲಕ್ಷ - ಕಮಾನು ನಿರ್ಮಾಣಕ್ಕೆ ವೆಚ್ಚ

₹ 30 ಲಕ್ಷ - ತಂತಿಬೇಲಿ ಅಳವಡಿಕೆಗೆ ಖರ್ಚು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು