ಭಾನುವಾರ, ಮಾರ್ಚ್ 29, 2020
19 °C
ಹೊಸ ಬಸ್ ನಿಲ್ದಾಣದಿಂದಲೇ ಕಾರ್ಯಾಚರಣೆ ಮುಂದುವರಿಸಲು ಒತ್ತಾಯ

ಹಳೇ ಬಸ್ ನಿಲ್ದಾಣ ಕಟ್ಟಡ ಕೆಡವಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಾರಿಕಾಂಬಾ ಜಾತ್ರೆಯ ಕಾರಣ ಎಲ್ಲ ಬಸ್‌ಗಳ ಕಾರ್ಯಾಚರಣೆ ಹೊಸ ಬಸ್ ನಿಲ್ದಾಣದಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಶಿಥಿಲವಾಗಿರುವ ಹಳೇ ಬಸ್ ನಿಲ್ದಾಣ ಕೆಡವಿ, ಹೊಸ ಕಟ್ಟಡ ನಿರ್ಮಾಣ ಪ್ರಾರಂಭಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಾತ್ರೆ ಮುಗಿದಿದ್ದರೂ ಇನ್ನೂ ಹೊಸ ಬಸ್‌ ನಿಲ್ದಾಣದಿಂದ ಬಸ್‌ಗಳು ಹೊರಡುತ್ತಿವೆ. ಇದನ್ನು ಮುಂದುವರಿಸಿ, ಹಳೇ ಬಸ್ ನಿಲ್ದಾಣದ ಕಟ್ಟಡ ತೆರವು ಮಾಡಬಹುದು. ಒಂದೊಮ್ಮೆ ಬಸ್ ನಿಲ್ದಾಣ ಇಲ್ಲಿಗೆ ಮತ್ತೆ ಸ್ಥಳಾಂತರಗೊಂಡರೆ, ಕಟ್ಟಡ ತೆರವುಗೊಳಿಸುವುದು ಕಷ್ಟವಾಗುತ್ತದೆ’ ಎಂದರು.

‘ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕಟ್ಟಡ ತೆರವಿಗೆ ಟೆಂಡರ್‌ ಕರೆದರೆ ಯಾರೂ ಬರುತ್ತಿಲ್ಲ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿ ಹೇಳಿದರು.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಸ್‌, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗಿದೆ. ಕೊರೊನಾ ಶಂಕಿತರು ಬಂದರೆ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ತಾಲ್ಲೂಕು ಆಡಳಿತ ಸೂಚಿಸಿದ್ದು, ಇದನ್ನು ಮಾಡಲಾಗುವುದು ಎಂದು ಹೇಳಿದರು.

ತಾಲ್ಲೂಕಿನ ಭೈರುಂಬೆಯ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ವರ್ಗಾವಣೆಯ ಗೊಂದಲದಲ್ಲಿ ಮೂರು ದಿನಗಳಿಂದ ಆಸ್ಪತ್ರೆ ಬಾಗಿಲು ಮುಚ್ಚಿದೆ. ಆಸ್ಪತ್ರೆಗೆ ಬರುವ ರೋಗಿಗಳು ವಾಪ‍ಸ್ ಹೋಗುವಂತಾಗಿದೆ. ಆಸ್ಪತ್ರೆಯ ಬೀಗ ಇಟ್ಟುಕೊಂಡಿರುವವರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಸದಸ್ಯ ನರಸಿಂಹ ಹೆಗಡೆ ಒತ್ತಾಯಿಸಿದರು.

‘ಸರ್ಕಾರಿ ವ್ಯವಸ್ಥೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ವರ್ಗಾವಣೆಗೊಂಡಿರುವ ಆಸ್ಪತ್ರೆಯ ವೈದ್ಯೆ, ಕಟ್ಟಡದ ಬೀಗವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ವೈದ್ಯರು ಪ್ರತಿದಿನ ಆಸ್ಪತ್ರೆಗೆ ಬಂದು ಹೋಗುತ್ತಿದ್ದರೂ, ಅವರಿಗೆ ಒಳಗೆ ಹೋಗಲು ಆಗುತ್ತಿಲ್ಲ. ವೈಯಕ್ತಿಕ ಕಾರಣಕ್ಕಾಗಿ ರೋಗಿಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದರು.

ಬನವಾಸಿ ಭಾಗದಲ್ಲಿ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿಂದ ರೈತರ ಬೆಳೆಗೆ ನೀರು ಕೊಡಲಾಗುತ್ತಿಲ್ಲ. ಹೆಸ್ಕಾಂ ಈ ಬಗ್ಗೆ ಗಮನಹರಿಸಬೇಕು ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಹೇಳಿದರು.

ಶಾಲೆಗಳಿಗೆ ರಜೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು