ಭಾನುವಾರ, ಜೂನ್ 26, 2022
21 °C

‘ಪ್ರಜಾವಾಣಿ’ ವರದಿ ಫಲಶ್ರುತಿ: ತಾತ್ಕಾಲಿಕ ಕಲ್ಲಿನ ತಡೆಗೋಡೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಸಮುದ್ರದ ಕಡಲ್ಕೊರೆತ ಸಮಸ್ಯೆಯಿಂದ ನಲುಗಿ ಹೋಗಿದ್ದ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗಿದೆ. ಮನೆಗಳಿಗೆ ನೀರು ನುಗ್ಗಿ ಹಾನಿಯಾಗುವ ಆತಂಕದಲ್ಲಿದ್ದ ತೀರದ ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ.

ತಾಲ್ಲೂಕಿನ ಗಾಬಿತಕೇಣಿಯಲ್ಲಿನ ಕಡಲ್ಕೊರೆತ ಸಮಸ್ಯೆ ಸಾಮಾನ್ಯವಾಗಿತ್ತು. ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಜನರು ನಾಲ್ಕು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು. ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮಂಜೂರಾದ ಅನುದಾನವೂ ಬಳಕೆಯಾಗಿರಲಿಲ್ಲ. ಸ್ಥಳೀಯ ಜನರು ಮರಳಿನ ಚೀಲ ಬಳಸಿಕೊಂಡು ತಾತ್ಕಾಲಿಕ ತಡೆಗೋಡೆ ನಿರ್ಮಿಸಿಕೊಂಡಿದ್ದರು.

ತೌತೆ ಚಂಡಮಾರುತದಿಂದ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಅಲೆಗಳು ವೇಗವಾಗಿ ಅಪ್ಪಳಿಸಿದ ಪರಿಣಾಮ ತಾತ್ಕಾಲಿಕ ತಡೆಗೋಡೆಯು ನೆಲಸಮವಾಗಿತ್ತು. ಕಡಲ್ಕೊರೆತದ ಗಂಭೀರ ಸಮಸ್ಯೆ ಕುರಿತು, ‘ಪ್ರಜಾವಾಣಿ’ಯ ಮೇ 16ರ ಸಂಚಿಕೆಯಲ್ಲಿ ‘ಕಡಲ್ಕೊರೆತ: ಆತಂಕದಲ್ಲಿ ಗಾಬಿತಕೇಣಿ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಶಾಸಕಿ ರೂಪಾಲಿ ನಾಯ್ಕ, ಮುತುವರ್ಜಿ ವಹಿಸಿ ಮೇ 24ರಂದು ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೀಗ ಕಾಮಗಾರಿ ಮುಗಿದು ತಾತ್ಕಾಲಿಕ ಕಲ್ಲಿನ ತಡೆಗೋಡೆ ನಿರ್ಮಾಣವಾಗಿದೆ.

‘ಶಾಸಕರು ನೀಡಿದ ಭರವಸೆಯಂತೆ ತಡೆಗೋಡೆ ನಿರ್ಮಾಣವಾಗಿದೆ. ಮಳೆಗಾಲ ಮುಗಿದ ನಂತರ ಶಾಶ್ವತ ತಡೆಗೋಡೆ ನಿರ್ಮಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ. ‘ಪ್ರಜಾವಾಣಿ’ಯ ವರದಿಯಿಂದ ದೊರೆತ ಸ್ಪಂದನೆಗೆ ಅಭಿನಂದನೆ ಸಲ್ಲಿಸು
ತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ಧೂರಿ ಹರ್ಷ ವ್ಯಕ್ತಪಡಿಸಿದರು.

‘4– 5 ವರ್ಷಗಳಿಂದ ಉಂಟಾದ ನಿರಂತರ ಕಡಲ್ಕೊರೆತದಿಂದ ಮನೆಯ ಕಾಂಪೌಂಡ್ ನಾಶವಾಗಿತ್ತು. ವೈಯಕ್ತಿಕ ಖರ್ಚಿನಿಂದ ನಿರ್ಮಿಸಿದ ತಡೆಗೋಡೆಯು ನೆಲಸಮವಾಗಿತ್ತು. ತಾತ್ಕಾಲಿಕ ಕಲ್ಲಿನ ತಡೆಗೋಡೆಯಿಂದ ಧೈರ್ಯ ಮೂಡಿಸಿದೆ’ ಎಂದು ಕಡಲ್ಕೊರೆತ ಭೀತಿ ಎದುರಿಸಿದ ಮಹಿಳೆ ಸುಮನಾ ಚಂದ್ರಕಾಂತ ಕುಮಟೆಕರ ತಿಳಿಸಿದರು.

*
ಗಾಬಿತಕೇಣಿಯ ಕಡಲ್ಕೊರೆತ ಸಮಸ್ಯೆಗೆ ತಾತ್ಕಾಲಿಕ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದೆ. ಮಳೆಗಾಲದ ನಂತರ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
– ರೂಪಾಲಿ ನಾಯ್ಕ, ಶಾಸಕಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು