ಶುಕ್ರವಾರ, ಏಪ್ರಿಲ್ 23, 2021
32 °C
ಶಿರಸಿ: ಗಾಳಿ ಮಳೆಗೆ ನೆಲಕ್ಕುರುಳಿತು ಮೂರೂವರೆ ಶತಮಾನಗಳ ವೃಕ್ಷ

‘ಕುಳ್ಳರ ಲೋಕ’ದ ಮರ ಇನ್ನು ನೆನಪು

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಕೆಂಗ್ರೆಮಠ ಗ್ರಾಮದ ಮಾಲ್ಕಿ ಜಮೀನಿನಲ್ಲಿದ್ದ ಸುಮಾರು ಮೂರೂವರೆ ಶತಮಾನಗಳಷ್ಟು ಹಳೆಯದಾದ ಗೋಳಿ ಮರ ಮಳೆ–ಗಾಳಿಗೆ ನೆಲಕ್ಕುರುಳಿದೆ. ಅರ್ಧ ಎಕರೆಯಷ್ಟು ಪ್ರದೇಶಕ್ಕೆ ವ್ಯಾಪಿಸಿಕೊಂಡಿದ್ದ ಈ ಮರದ ಬುಡದಲ್ಲಿ, ‘ಕುಳ್ಳರ ಲೋಕ’ ಎಂಬ ಕನ್ನಡ ಚಲನಚಿತ್ರದ ಚಿತ್ರೀಕರಣ ನಡೆದಿತ್ತು.

ವಿಶಾಲವಾಗಿ ಬೆಳೆದಿದ್ದ ಈ ಮರವು ನೆರಳು ನೀಡುವ ಜೊತೆಗೆ ನೆನಪಿಡಬಹುದಾದ ಹಲವು ಕ್ಷಣಗಳಿಗೆ ಸಾಕ್ಷಿಯಾಗಿದೆ. ಮರದ ಕೊಂಬೆಗಳು ವೃತ್ತಾಕಾರವಾಗಿ ಹರಡಿಕೊಂಡು ನೆರಳು ನೀಡುತ್ತಿದ್ದ ಕಾರಣಕ್ಕೆ ಈ ಪ್ರದೇಶ ಪಿಕ್‌ನಿಕ್ ತಾಣವಾಗಿಯೂ ಮಾರ್ಪಟ್ಟಿತ್ತು. ಇತ್ತೀಚೆಗೆ ಬೀಸಿದ ರಭಸದ ಗಾಳಿಗೆ ಮರ ನಾಲ್ಕು ಪಾಲಾಗಿ ಬಿದ್ದಿದೆ.

‘ಗೋಳಿ ಅಥವಾ ಪಿಳಲಿ ಎಂಬ ಜಾತಿಗೆ ಸೇರಿದ ಈ ಮರ 350 ವರ್ಷಗಳಷ್ಟು ಹಳೆಯದಾಗಿರಬಹುದು. ಈ ಮರದ ಎಲೆಗಳು ಧಾರ್ಮಿಕ ಆಚರಣೆ ವೇಳೆ ಬಳಕೆಗೆ ಉಪಯುಕ್ತವಾಗಿದ್ದವು’ ಎನ್ನುತ್ತಾರೆ ಪರಿಸರ ತಜ್ಞ ಶಿವಾನಂದ ಕಳವೆ.

‘ವಿಶಾಲವಾಗಿ ಚಾಚಿದ್ದ ಮರದಿಂದಾಗಿ ಈ ಭಾಗದಲ್ಲಿ ತಂಪು ವಾತಾವರಣವಿತ್ತು. ಶಾಲಾ ವಿದ್ಯಾರ್ಥಿಗಳು ವನವಿಹಾರಕ್ಕೆಂದು ಇಲ್ಲಿಗೆ ಬರುತ್ತಿದ್ದರು. ನೂರಾರು ಪಕ್ಷಿಗಳಿಗೂ ಮರ ವಾಸಕ್ಕೆ ಅವಕಾಶ ನೀಡಿತ್ತು. ಈಗ ಇವೆಲ್ಲ ಮರೆಯಾಗುವಂತಾಗಿದೆ’ ಎಂದು ಈ ಮರದ ಸಮೀಪ ವೈದ್ಯಾಲಯ ನಡೆಸುತ್ತಿರುವ ವಿಶ್ವನಾಥ ಕಡಬಾಳ ಅನಿಸಿಕೆ ವ್ಯಕ್ತಪಡಿಸಿದರು.

‘2000ನೇ ಇಸವಿಯಲ್ಲಿ ಕುಳ್ಳರ ಲೋಕ ಎಂಬ ಚಿತ್ರೀಕರಣಕ್ಕೆ ಮರದ ಗಟ್ಟಿಮುಟ್ಟಾದ ಕೊಂಬೆಗಳಲ್ಲಿ ಮತ್ತು ಬುಡದಲ್ಲಿ ಸೆಟ್ ರಚಿಸಿಕೊಟ್ಟಿದ್ದೆ. ಮರದ ಬುಡದಲ್ಲಿ 40, ಮರದ ಟೊಂಗೆಗಳಲ್ಲಿ ಮೂರು ಕುಟೀರಗಳನ್ನು ನಿರ್ಮಿಸಿದ್ದೆ. ಕೃತಕ ಹುತ್ತವನ್ನೂ ಮೂಡಿಸಿದ್ದೆ. 15 ದಿನ ಚಿತ್ರೀಕರಣ ಇಲ್ಲಿಯೇ ನಡೆದಿತ್ತು’ ಎಂದು ಕಲಾವಿದ ಬಾಳೆಗದ್ದೆಯ ಶ್ರೀನಿವಾಸ ಹೆಗಡೆ ನೆನಪಿನ ಬುತ್ತಿಯನ್ನು ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟರು.

‘40ಕ್ಕೂ ಅಧಿಕ ಮಂದಿ ಕುಳ್ಳರು ಅಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಪ್ರಸಿದ್ಧ ನಟರಾದ ವಿನೋದ್ ಆಳ್ವಾ, ನಿಹಾರಿಕಾ, ನೀರ್ನಳ್ಳಿ ರಾಮಕೃಷ್ಣ ಮುಂತಾದವರು ಭಾಗವಹಿಸಿದ್ದರು. ಬಇಲ್ಲಿ ಚಿತ್ರೀಕರಣ ನಡೆದಿದ್ದ ನಂತರ ಈ ಮರ ಹೆಚ್ಚು ಪ್ರಸಿದ್ಧಿಗೆ ಬಂದಿತ್ತು’ ಎಂದು ಅವರು ನೆನಪಿಸಿಕೊಂಡರು. ಶರಣ್ ದಾವಣಗೆರೆ ನಿರ್ದೇಶನದ ಈ ಸಿನಿಮಾವನ್ನು ವಾಸುದೇವ ಶಾನುಭಾಗ ನಿರ್ಮಿಸಿದ್ದರು. 

‘ಚಿತ್ರೀಕರಣಕ್ಕೆ ಸೂಕ್ತ ಪ್ರದೇಶ ಹುಡುಕಾಟ ನಡೆಸುತ್ತ ಚಿತ್ರತಂಡ ನಮ್ಮೂರಿಗೆ ಬಂದಿತ್ತು. ಅನೇಕ ಪ್ರದೇಶಗಳನ್ನು ತೋರಿಸಿದರೂ ಅವರಿಗೆ ಹಿಡಿಸಿರಲಿಲ್ಲ. ಕೊನೆಗೆ ಈ ಮರವಿದ್ದ ಜಾಗ ಕಂಡು ತಕ್ಷಣವೇ ಚಿತ್ರೀಕರಣ ಇಲ್ಲಿಯೇ ನಡೆಸಲು ತೀರ್ಮಾನಿಸಿದ್ದರು’ ಎಂದು ಹೇಳಿದರು.  

‘ದೊಡ್ಡ ಮರವಿದ್ದ ಹೆಮ್ಮೆ’:

‘ನಮ್ಮ ಜಮೀನಿನಲ್ಲಿ ಇಷ್ಟೊಂದು ವಿಶಾಲವಾದ ಮರವೊಂದಿದೆ ಎಂಬ ಹೆಮ್ಮೆ ನನಗಿತ್ತು. ಇತ್ತೀಚಿನ ದಿನಗಳಲ್ಲಿ ಕೆಲಮರಗಳು ಉರುಳಿ ಬಿದ್ದಿವೆ. ಆದರೆ, ಗೋಳಿ ಮರ ಬಿದ್ದಿರುವುದು ತಡವಾಗಿ ಗಮನಕ್ಕೆ ಬಂದಿತು. ವಿಶಿಷ್ಟ ರೀತಿಯಲ್ಲಿದ್ದ ಮರ ಧರೆಗುರುಳಿದ್ದು ಬೇಸರ ತಂದಿದೆ. ಮಳೆಗಾಲ ಮುಗಿದ ಬಳಿಕ ಮರ ತೆರವುಗೊಳಿಸುತ್ತೇವೆ’ ಎಂದು ಜಮೀನಿನ ಮಾಲೀಕ ಎಲ್.ವಿ.ಹೆಗಡೆ ತಿಳಿಸಿದರು.

------

* ಕುಳ್ಳರ ಲೋಕ ಚಿತ್ರದ ಚಿತ್ರೀಕರಣವಷ್ಟೇ ಅಲ್ಲದೆ ವಿಶಿಷ್ಟವಾಗಿದ್ದ ಮರದೊಂದಿಗೆ ಈ ಭಾಗದ ಹೆಚ್ಚಿನ ಜನರ ಒಡನಾಡಿದ್ದಾರೆ. ಅವೆಲ್ಲ ಕ್ಷಣಗಳು ಇನ್ನು ನೆನಪು ಮಾತ್ರ.

- ಶ್ರೀನಿವಾಸ ಹೆಗಡೆ, ಕಲಾವಿದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.