ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ: ಮೂವರು ಟಾಪರ್‌

ಕಾರವಾರ ಶೈಕ್ಷಣಿಕ ಜಿಲ್ಲೆಗೆ ಶೇ 89.94ರಷ್ಟು ಫಲಿತಾಂಶ: ‘ಎ’ ಗ್ರೇಡ್
Last Updated 19 ಮೇ 2022, 15:38 IST
ಅಕ್ಷರ ಗಾತ್ರ

ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವು ಗುರುವಾರ ಪ್ರಕಟವಾಗಿದ್ದು, ಕಾರವಾರ ಶೈಕ್ಷಣಿಕ ಜಿಲ್ಲೆಯು ಶೇ 89.94ರಷ್ಟು ಫಲಿತಾಂಶ ದಾಖಲಿಸಿದೆ. ಈ ಮೂಲಕ ‘ಎ’ ಗ್ರೇಡ್ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಶೈಕ್ಷಣಿಕ ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಪಡೆದುಕೊಂಡು ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ವಿದ್ಯಾರ್ಥಿಗಳು ಸಂಪೂರ್ಣ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಳು ವಿದ್ಯಾರ್ಥಿಗಳು 624, 10 ವಿದ್ಯಾರ್ಥಿಗಳು 623, 14 ವಿದ್ಯಾರ್ಥಿಗಳು 622 ಹಾಗೂ 12 ವಿದ್ಯಾರ್ಥಿಗಳು 621 ಹಾಗೂ 10 ವಿದ್ಯಾರ್ಥಿಗಳು 620 ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ. ಈ ಬಾರಿ 10,373 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 9,821 ಮಂದಿ ಮೊದಲ ಸಲ ಪರೀಕ್ಷೆ ಎದುರಿಸಿದ್ದರು. ಕೇವಲ 998 ಮಕ್ಕಳು ಅನುತ್ತೀರ್ಣರಾಗಿದ್ದಾರೆ.

‘ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವು, ಕೋವಿಡ್‌ಗೂ ಪೂರ್ವಕ್ಕಿಂತ ಉತ್ತಮವಾಗಿದೆ. ಉತ್ತೀರ್ಣರಾದವರಲ್ಲಿ ಸಾಂಖ್ಯಿಕವಾಗಿ ಹಾಗೂ ಗುಣಮಟ್ಟದಲ್ಲಿ ಗಮನಾರ್ಹವಾಗಿದೆ’ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮಾಧ್ಯಮ: ಅಂಕೋಲಾ ತಾಲ್ಲೂಕಿನ ಪೂರ್ಣಪ್ರಜ್ಞಾ ಪ್ರೌಢಶಾಲೆಯ ಕನ್ನಡ ಮಾಧ್ಯಮದ ಗೋವಿಂದ ಸಹದೇವ ನಾರ್ವೇಕರ 623 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾನೆ. ಅಲ್ಲದೇ ಕಾರವಾರ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.

ಹೊನ್ನಾವರದ ಎಸ್.ಕೆ.‍ಪಿ ಕಾಂಪೊಸಿಟ್ ಜೂನಿಯರ್ ಕಾಲೇಜಿನ ವಿಭಾ ವಿನಾಯಕ ಭಟ್ ಹಾಗೂ ಹೊನ್ನಾವರದ ಶಾರದಾಂಬಾ ಪ್ರೌಢಶಾಲೆಯ ಅನನ್ಯಾ ಹೆಗಡೆ 622 ಅಂಕಗಳೊಂದಿಗೆ (ಶೇ 99.52) ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಹೊನ್ನಾವರದ ಹಡಿನಬಾಳ ಸರ್ಕಾರಿ ಪ್ರೌಢಶಾಲೆಯ ಬಿ.ವಿ.ನಿಸರ್ಗಾ ಮತ್ತು ಕುಮಟಾದ ಆನಂದಾಶ್ರಮ ಪ್ರೌಢಶಾಲೆಯ ಪೃಥ್ವೀಶ ವಿದ್ಯಾಧರ ದೀಕ್ಷಿತ್ 621 ಅಂಕಗಳನ್ನು ಪಡೆದಿದ್ದು (ಶೇ 99.36) ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದಾರೆ.

ಉರ್ದು ಮಾಧ್ಯಮ: ಹೊನ್ನಾವರ ತಾಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಉರ್ದು ಮಾಧ್ಯಮದ ವಿದ್ಯಾರ್ಥಿನಿ ಉಮಯ್ಯಾ ತಹ್ಸೀನ್ ಫಯಾಝ್ ಅಹ್ಮದ್ ಹಗಲ್ವಾಡಿ 617 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈಕೆ ರಾಜ್ಯಕ್ಕೆ ಒಂಬತ್ತನೆ, ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆ:

ಕಾರವಾರದ ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ ಮೋಹನ್ ಕಲ್ಗುಟ್ಕರ್, ಅಂಗವಿಕಲ ವಿದ್ಯಾರ್ಥಿಗಳ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು 625ಕ್ಕೆ 611 ಅಂಕಗಳನ್ನು ಪಡೆದುಕೊಂಡಿದ್ದು, ಶೇ 97.76ರಷ್ಟು ಫಲಿತಾಂಶ ಗಳಿಸಿದ್ದಾರೆ.

ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಕುತೂಹಲದಿಂದ ಹುಡುಕುತ್ತಿದ್ದುದು ಕಂಡುಬಂತು. ಮೊಬೈಲ್ ಫೋನ್ ಮೂಲಕವೂ ಹಲವು ಫಲಿತಾಂಶ ತಿಳಿದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT