ಶನಿವಾರ, ಅಕ್ಟೋಬರ್ 24, 2020
18 °C
ಗಾಳಿಯಲ್ಲಿ ಸುತ್ತು ಹೊಡೆದು ಸಮುದ್ರಕ್ಕೆ ಬಿದ್ದ ಗ್ಲೈಡರ್

ಕಾರವಾರ ಕಡಲ ತೀರದಲ್ಲಿ ಮೋಟರ್ ಗ್ಲೈಡರ್ ಅವಘಡ: ನೌಕಾನೆಲೆ ಅಧಿಕಾರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ನಡೆದ ಮೋಟರ್ ಗ್ಲೈಡರ್ ಅವಘಡದಲ್ಲಿ ಪ್ರವಾಸಿಗರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಸೀಬರ್ಡ್ ನೌಕಾನೆಲೆಯಲ್ಲಿ ಅಧಿಕಾರಿಯಾಗಿದ್ದ ಆಂಧ್ರಪ್ರದೇಶದ ಮಧುಸೂದನ ರೆಡ್ಡಿ (56) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಸ್ನೇಹಿತರೊಂದಿಗೆ ಅವರು ಬಂದಿದ್ದರು. ಗ್ಲೈಡರ್‌ನ ಮಾರ್ಗದರ್ಶಕ (ಇನ್‌ಸ್ಟ್ರಕ್ಟರ್) ವಿದ್ಯಾಧರ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರಗಳಲ್ಲಿ ನೋಡಿ: 

ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯ ಬಳಿಯಿಂದ ಗ್ಲೈಡರ್‌ ಆಗಸಕ್ಕೇರಿತ್ತು. ಕಡಲತೀರದಲ್ಲಿ ಒಂದು ಸುತ್ತು ಹಾರಾಡಿ, ಮತ್ತೊಂದು ಸುತ್ತು ಬರುವಷ್ಟರಲ್ಲಿ ಗ್ಲೈಡರ್‌ನ ಹಗ್ಗ ತುಂಡಾಯಿತು. ವೇಗದ ಗಾಳಿಯೂ ಬೀಸುತ್ತಿದ್ದ ಕಾರಣ ಮಾರ್ಗದರ್ಶಕ ವಿದ್ಯಾಧರ ವೈದ್ಯ ಅವರಿಗೆ ಗ್ಲೈಡರ್‌ನ ಮೇಲಿನ ನಿಯಂತ್ರಣ ತಪ್ಪಿತು. ಕಡಲತೀರದಿಂದ ಸಾಕಷ್ಟು ದೂರದಲ್ಲಿ ಸಮುದ್ರದಲ್ಲಿ ಗ್ಲೈಡರ್ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ದೋಣಿಗಳಲ್ಲಿ ಧಾವಿಸಿದ ಮೀನುಗಾರರು ವಿದ್ಯಾಧರ ಅವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು. ಗ್ಲೈಡರ್ ಗಾಳಿಯಲ್ಲಿ ಸುತ್ತು ಹೊಡೆದ ಕಾರಣ ಕಾಲಿಗೆ ಅದರ ಹಗ್ಗ ಸುತ್ತಿಕೊಂಡಿತ್ತು. ಹಾಗಾಗಿ ಗ್ಲೈಡರ್‌ ಮಧುಸೂದನ ಅವರನ್ನೂ ಎಳೆದುಕೊಂಡು ನೀರಿನೊಳಗೆ ಹೋಯಿತು.

ತಕ್ಷಣ ಕಾರ್ಯಾಚರಣೆಗೆ ಇಳಿದ ಜೀವರಕ್ಷಕ ಸಿಬ್ಬಂದಿ ಚಂದನ್ ಜೋಶಿ, ಸುರೇಂದ್ರ ರೇಡ್ಕರ್ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಮತ್ತೊಂದು ದೋಣಿಯಲ್ಲಿ ಸ್ಥಳಕ್ಕೆ ಹೋದರು. ಮಳೆಯಿಂದಾಗಿ ಸಮುದ್ರದ ನೀರು ಇನ್ನೂ ಸಂಪೂರ್ಣ ತಿಳಿಯಾಗದ ಕಾರಣ ಶೋಧಕಾರ್ಯ ಕಷ್ಟವಾಗಿತ್ತು. ಆದರೂ ಹರಸಾಹಸ ಮಾಡಿ ಗ್ಲೈಡರ್ ಸಮೇತ ಪ್ರವಾಸಿಗನನ್ನು ಕಡಲತೀರಕ್ಕೆ ಎಳೆದು ತಂದರು.

ಪ್ರಜ್ಞೆ ತಪ್ಪಿದ್ದ ಪ್ರವಾಸಿಗನ ಹೊಟ್ಟೆಯನ್ನು ಒತ್ತಿ ನೀರು ಹೊರಹಾಕಲು ಅಲ್ಲಿದ್ದ ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ ಪ್ರಯತ್ನಿಸಿದರು. ಬಳಿಕ ನಗರಠಾಣೆ ಇನ್‌ಸ್ಪೆಕ್ಟರ್ ಸಂತೋಷ ಅವರ ಜೀಪಿನಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಅಷ್ಟರಲ್ಲಿ ಅವರು ಮೃತಪಟ್ಟರು.

ಜಿಲ್ಲಾ ಆಸ್ಪತ್ರೆಯಿಂದ ಒಂದು ಕಿಲೋಮೀಟರ್ ದೂರದಲ್ಲೇ ಕಡಲತೀರವಿದೆ. ಈ ಅವಘಡ ನಡೆದು ಅರ್ಧ ಗಂಟೆ ಕಳೆದರೂ ಸ್ಥಳಕ್ಕೆ ಆಂಬ್ಯುಲೆನ್ಸ್ ಬರಲಿಲ್ಲ. ಇದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು