ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ ವಿವಾದ: ಭಟ್ಕಳ ಪುರಸಭೆಗೆ ಮುತ್ತಿಗೆ

Last Updated 28 ಜೂನ್ 2022, 14:01 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ಪುರಸಭೆ ಕಚೇರಿ ಎದುರು ಅಳವಡಿಸಿದ ಉರ್ದು ನಾಮಫಲಕ ತೆರವಿಗೆ ಮುಂದಾದ ಪೊಲೀಸರನ್ನು ಮುಸ್ಲಿಂ ಸಮುದಾಯದವರುಮಂಗಳವಾರ ತಡೆದರು. ನಾಮಫಲಕ ತೆಗೆಯದಂತೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಮುಸ್ಲಿಂ ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪುರಸಭೆ ಕಟ್ಟಡಕ್ಕೆ ಕನ್ನಡ, ಇಂಗ್ಲಿಷ್‌ ಜೊತೆ ಉರ್ದು ನಾಮಫಲಕ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭುವನೇಶ್ವರಿ ಕನ್ನಡ ಸಂಘ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿದ್ದರು. ನಾಮಫಲಕ ತೆಗೆಯುವಂತೆ ಪುರಸಭೆಗೆ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ನೀಡಿದ್ದರು.

ಮನವಿ ಪರಿಶೀಲಿಸಿದ ಉಪ ವಿಭಾಗಾಧಿಕಾರಿ, ಉರ್ದು ನಾಮಫಲಕ ತೆರವು ಮಾಡುವಂತೆ ಮುಖ್ಯಾಧಿಕಾರಿಗೆ ಆದೇಶ ಮಾಡಿದ್ದರು. ಮುಖ್ಯಾಧಿಕಾರಿ ಪೊಲೀಸ್ ಭದ್ರತೆಯಲ್ಲಿ ನಾಮಫಲಕ ತೆರವಿಗೆ ಮುಂದಾದರು. ಆಗ ಪುರಸಭೆಯ ಮುಸ್ಲಿಂ ಸಮುದಾಯದ ಸದಸ್ಯರು ಹಾಗೂ ಸ್ಥಳೀಯರು ಅದನ್ನು ತೆಗೆಯದಂತೆ ತಾಕೀತು ಮಾಡಿದರು. ಮುಸ್ಲಿಂ ವ್ಯಾಪಾರಿಗಳು ಕೂಡ ಅಂಗಡಿಗಳನ್ನು ಬಂದ್ ಮಾಡಿ ಪುರಸಭೆ ಎದುರು ಸೇರಿದರು.

ತಹಶೀಲ್ದಾರ್ ಸುಮಂತ.ಬಿ ಹಾಗೂ ಉಪವಿಭಾಗಾಧಿಕಾರಿ ಮಮತಾ ದೇವಿ, ‘ಸರ್ಕಾರಿ ನಿಯಮದ ಪ್ರಕಾರ, ಸರ್ಕಾರಿ ಕಚೇರಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್‌ ಹೊರತು ಪಡಿಸಿ ಸ್ಥಳೀಯ ಭಾಷೆಯ ಫಲಕ ಬಳಸಲು ಅವಕಾಶ ಇಲ್ಲ’ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಸೀಂಜೀ, ‘ಪುರಸಭೆ ಸದಸ್ಯರು ನಿರ್ಧರಿಸಿ ಈ ನಾಮಫಲಕ ಅಳವಡಿಸಲಾಗಿದೆ. ಪುರಸಭೆ ಕಾಯ್ದೆಯಲ್ಲಿ ಕೂಡ ಶೇ 33ರಷ್ಟು ಸ್ಥಳೀಯ ಭಾಷಿಕರು ಇರುವ ಕಡೆ ಆ ಭಾಷೆಯ ನಾಮಫಲಕ ಬಳಸಲು ಅವಕಾಶ ಇದೆ ಎಂದಿದೆ’ ಎಂದು ಪಟ್ಟು ಹಿಡಿದರು.

ಅಂತಿಮವಾಗಿ ಪುರಸಭೆಯ ನಿರ್ಧಾರದ ಬಗ್ಗೆ ನಿರ್ಣಯ ಕೇಳಲಾಯಿತು. ‘ಮೂರು ದಿನಗಳ ಒಳಗೆ ಸದಸ್ಯರ ಸಭೆ ಕರೆದು ನಿರ್ಧರಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು. ಇದಕ್ಕೆ ಮನ್ನಣೆ ನೀಡಿದ ಅಧಿಕಾರಿಗಳು ನಾಮಫಲಕ ತೆರವು ಕಾರ್ಯಾಚರಣೆ ಕೈಬಿಟ್ಟು ಅಲ್ಲಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT