ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲಿ ಪ್ರಸಂಗ ಡಿಜಿಟಲೀಕರಣ ಆರಂಭ: ಎಂ.ಎ.ಹೆಗಡೆ ದಂಟ್ಕಲ್

Last Updated 20 ಏಪ್ರಿಲ್ 2019, 14:30 IST
ಅಕ್ಷರ ಗಾತ್ರ

ಶಿರಸಿ: ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯ ಟೆಂಡರ್ ಮುಗಿದಿದ್ದು, ಸದ್ಯದಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್ ಹೇಳಿದರು.

ಶನಿವಾರ ಇಲ್ಲಿ ನಡೆದ ಯಕ್ಷಾಂಕುರ ಸಂಸ್ಥೆಯ 15ನೇ ವರ್ಷದ ಮಕ್ಕಳ ಯಕ್ಷಗಾನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು. ಯಕ್ಷಗಾನದಲ್ಲಿ 5000ಕ್ಕೂ ಮಿಕ್ಕಿ ಪ್ರಸಂಗಗಳು ಇವೆ. ಇವುಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಒಳಪಡಿಸಿ, ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕೆಂದು ಒಂದು ವರ್ಷದಿಂದ ನಡೆಸಿದ ಪ್ರಯತ್ನ ಈಗ ಅನುಷ್ಠಾನಗೊಳ್ಳುವ ಹಂತಕ್ಕೆ ತಲುಪಿದೆ. ಪ್ರತಿ ವರ್ಷ 100 ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸಲು ಯೋಚಿಸಲಾಗಿದೆ ಎಂದರು.

ಯಕ್ಷಗಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿರುವ ಅಡ್ಡಾದಿಡ್ಡಿಯಾಗಿ, ತಲೆಕೆಳಗಾಗಿ ಕುಣಿಯುವ ಪ್ರವೃತ್ತಿಯ ಬಗ್ಗೆ ಪ್ರಜ್ಞಾವಂತ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಪ್ರಯೋಗಗಳಿಗೆ ಕಲಾವಿದರಷ್ಟೇ ಪ್ರೇಕ್ಷಕರೂ ಹೊಣೆಗಾರರಾಗಿದ್ದಾರೆ. ಸದಭಿರುಚಿಯ ಪ್ರೇಕ್ಷಕರನ್ನು ಸಿದ್ಧಪಡಿಸುವ ಮೂಲಕ ಇಂತಹ ಅಪದ್ಧಗಳಿಗೆ ಕಡಿವಾಣ ಹಾಕಬಹುದು. ವಿಪರೀತ ಕುಣಿತಗಳನ್ನು ನೋಡಿದಾಗ ಚಪ್ಪಾಳೆ ಹಾಕುವುದನ್ನು ನಿಲ್ಲಿಸಬೇಕು. ಇಂತಹ ಶಿಬಿರಗಳಲ್ಲಿ ತರಬೇತಿ ಪಡೆಯುವ ಮಕ್ಕಳು ಭವಿಷ್ಯದಲ್ಲಿ ಪ್ರೇಕ್ಷಕರಾದಾಗ ಪರಿಸ್ಥಿತಿ ಸುಧಾರಿಸಬಹುದು ಎಂದು ಆಶಾಭಾವ ವ್ಯಕ್ತಪಡಿಸಿದರು.

‘ಮಕ್ಕಳಿಗೆ ಕಲಿಕೆಯ ಹಂತದಲ್ಲಿ ಸರಿಯಾದ ಗುರುಗಳ ಮಾರ್ಗದರ್ಶನ ಬೇಕು. ತರಬೇತಿ ಶಿಬಿರಗಳು ಇತ್ತೀಚಿನ ಫ್ಯಾಷನ್ ಆಗಿವೆ. ಗುರುವಿನ ಸೀಮಿತ ಜ್ಞಾನದಿಂದ ಮಕ್ಕಳಿಗೆ ನಷ್ಟವಾಗುತ್ತದೆ. ನಾಲ್ಕಕ್ಷರ ಬರೆಯಲು ಬರುವವರು ಪ್ರಸಂಗ ರಚಿಸುತ್ತಾರೆ. ಪ್ರಸಂಗದ ಬಗ್ಗೆ ಯೋಚಿಸದೇ, ಪ್ರಸಂಗಕರ್ತರೆಂದು ಹೇಳಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಅಸಹಾಯಕತೆಯಿಂದ ಇವುಗಳನ್ನೆಲ್ಲ ಸಹಿಸಿಕೊಳ್ಳಬೇಕಾಗುತ್ತಿದೆ. ಈ ವಾತಾವರಣದ ನಡುವೆ ಅಭಿರುಚಿ ಹುಟ್ಟಿಸುವ ಗುರುಗಳು ಇದ್ದಾರೆನ್ನುವುದು ಸಮಾಧಾನದ ಸಂಗತಿ. ಅಂತಹವರಲ್ಲಿ ಐನಬೈಲ್ ಪರಮೇಶ್ವರ ಹೆಗಡೆ ಒಬ್ಬರು. ಪ್ರಾಮಾಣಿಕತೆ, ನಿಷ್ಠೆ, ಸರ್ವಾಂಗ ಪರಿಣಿತಿ ಅವರ ಮೆಚ್ಚಬೇಕಾಗಿರುವ ಗುಣ’ ಎಂದು ಶ್ಲಾಘಿಸಿದರು.

ಎಂ.ಎ.ಹೆಗಡೆ ಅವರು ತಮಗೆ ದೊರೆಯುವ ಗೌರವಧನದಲ್ಲಿ ₹ 10ಸಾವಿರ ಮೊತ್ತವನ್ನು ಶಿಬಿರಕ್ಕೆ ದೇಣಿಗೆಯಾಗಿ ನೀಡಿದರು. ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ವೈಶಾಲಿ ಮಾತನಾಡಿ, ಶ್ರೇಷ್ಠ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಿದ ಸಾರ್ಥಕ ಭಾವ ಪಾಲಕರದ್ದಾಗಿದೆ ಎಂದರು. ಶಿಬಿರದ ನಿರ್ದೇಶಕ ಪರಮೇಶ್ವರ ಹೆಗಡೆ ಐನಬೈಲ್ ಅವರು, ‘ಮಕ್ಕಳಲ್ಲಿ, ಸಾಮಾನ್ಯ ಜನರಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸಲು ಶಿಬಿರ ಸಹಕಾರಿಯಾಗಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದರು.

ನಾಗೇಂದ್ರ ಭಟ್ಟ ನಿರೂಪಿಸಿದರು. ಸುರೇಶ ಹೆಗಡೆ ಸಹಕರಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ 40 ಮಕ್ಕಳು ‘ಗುರುದಕ್ಷಿಣೆ’, ‘ಶ್ರೀನಿವಾಸ ಕಲ್ಯಾಣ’, ‘ಲಕ್ಷಣಾ ವಿವಾಹ’ ಆಖ್ಯಾನ ಪ್ರದರ್ಶಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT