ಕಾರವಾರ: ತ್ವರಿತಗತಿಯಲ್ಲಿ ಗ್ರಾಮೀಣ ರಸ್ತೆ ನಿರ್ಮಿಸಿ

ಕಾರವಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಳ್ಳಲಿರುವ, ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆ ನಡೆಸಿದ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಗತಿಯ ಮಾಹಿತಿ ಪಡೆದರು.
‘ಜಿಲ್ಲೆಯಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ಗುರಿ ಹೊಂದಲಾಗಿದ್ದು, ಈವರೆಗೆ 49 ಕಿ.ಮೀ. ಪೂರ್ಣಗೊಂಡಿದೆ’ ಎಂದು ಯೋಜನೆಗೆ ಸಂಬಂಧಿಸಿದ ಅಧಿಕಾರಿ ತಿಳಿಸಿದರು.
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸಂಸದ, ‘ಹಳ್ಳಿಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ತ್ವರಿತವಾಗಿ ಹೊಸ ರಸ್ತೆ ನಿರ್ಮಣಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾರಣ ಹೇಳದೆ ಬೇಗನೆ ಕೆಲಸ ಪೂರ್ಣಗೊಳಿಸಿ’ ಎಂದರು.
‘ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಮೂರನೇ ಸ್ಥಾನ ಪಡೆದಿದ್ದು ಈಗಾಗಲೇ 90 ಸಾವಿರ ಜನರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. 13,955 ಜನ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರದ್ ನಾಯಕ ಮಾಹಿತಿ ನೀಡಿದರು.
‘ಆಯುಷ್ಮಾನ್ ಕಾರ್ಡ್ ವಿತರಣೆ ವಿಳಂಬವಾಗುತ್ತಿರುವ ದೂರುಗಳಿವೆ. ಕಾರ್ಡ್ ಸಿಗದೇ ಜನರು ತೊಂದರೆ ಅನುಭವಿಸುವ ಸಮಸ್ಯೆ ತಪ್ಪಿಸಿ. ಕಾರ್ಡ್ ವಿತರಣೆ ಚುರುಕಾಗಿಸಿ’ ಎಂದು ಸಂಸದರು ಸೂಚಿಸಿದರು.
ನರೇಗಾ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಯೋಜನೆಗಳ ಜಾರಿಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಅವರು ಎಚ್ಚರಿಸಿದರು.
‘ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಚೀಟಿ ಹೊಂದಿರುವ 17 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದು, ಈಗಾಗಲೇ ಶೇ 55.91 ರಷ್ಟು ಜನರನ್ನು ತಲುಪಿದ್ದೇವೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಎಂ.ಪ್ರಿಯಾಂಗಾ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ ಇದ್ದರು.
ಜೇನುತುಪ್ಪಕ್ಕೆ ಮಾರುಕಟ್ಟೆ
‘ಉತ್ತರ ಕನ್ನಡದ ಜೇನುತುಪ್ಪವನ್ನು ಬ್ರ್ಯಾಂಡ್ ಮಾಡಿ ಮಾರುಕಟ್ಟೆ ಕಲ್ಪಿಸಲು ಅಧಿಕಾರಿಗಳು ಪ್ರಯತ್ನಶೀಲರಾಗಿ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಸರ್ಕಾರದ ಮಧುಮಿತ್ರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದ ಅವರು ಕೇಂದ್ರ ಸರ್ಕಾರದ ನಿಯಮ್ ಯೋಜನಾ ತಂಡದ ಜೊತೆ ಮಾತನಾಡಿದರು. ಮಾರುಕಟ್ಟೆ ಕಲ್ಪಿಸಲು ಅನುಸರಿಸಬೇಕಾದ ಕಾರ್ಯಕ್ರಮಗಳ ಪಟಟಿ ಸಿದ್ಧಪಡಿಸಲು ತೋಟಗಾರಿಕಾ ಇಲಾಖೆ ಅಧಿಕಾರಿಗೆ ಸೂಚಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.