ಹಳ್ಳಕ್ಕೆ ಸೇತುವೆ ನಿರ್ಮಿಸಲು ಒತ್ತಾಯ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ಮತ್ತು ಕೇರಿಯ ನಡುವಿನ ಹಳ್ಳಕ್ಕೆ ಸೇತುವೆ ಅಥವಾ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಕೇರಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ಬೇಲೇಗದ್ದೆಯ ಮುಕ್ರಿ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಬಡಗಣಿ ನದಿ ದಂಡೆಯ ಕೇರಿಯಲ್ಲಿ ಏಳು ಕುಟುಂಬಗಳು ತಲೆಮಾರುಗಳಿಂದ ವಾಸ ಮಾಡುತ್ತಿವೆ. ಕೇರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಕೇವಲ 60 ಮೀಟರ್ ಅಂತರವಿದ್ದರೂ ಹಳ್ಳದಿಂದಾಗಿ ಸಮರ್ಪಕ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆಗಾಲ ಹಳ್ಳದ ನೀರು ಕೋಡಿ ಹರಿಯುತ್ತದೆ. ಬೇಸಿಗೆಯಲ್ಲಿ ಸುತ್ತಮುತ್ತಲಿನ ಗಲೀಜು ತುಂಬಿ ಗಬ್ಬೆದ್ದು ನಾರುತ್ತದೆ. ಹೀಗಾಗಿ ನಿತ್ಯದ ಕೆಲಸ ಕಾರ್ಯಗಳಿಗೆ, ಪಡಿತರ ಸಾಮಗ್ರಿ ತರಲು, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬ ಸಮಸ್ಯೆಯಾಗುತ್ತಿದೆ’ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಮೀನು ಮಾರುಕಟ್ಟೆ, ಹೋಟೆಲ್‌ಗಳಿವೆ. ಅಲ್ಲಿಂದ ಪೈಪ್ ಮೂಲಕ ತ್ಯಾಜ್ಯದ ನೀರನ್ನು ಈ ಹಳ್ಳಕ್ಕೆ ಹರಿಸಲಾಗುತ್ತಿದೆ. ಅಕ್ಕಪಕ್ಕದ ನಿವಾಸಿಗಳೂ ತ್ಯಾಜ್ಯವನ್ನು ಸುರಿಯುತ್ತಾರೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪರಿಹಾರವಾಗಿ ಅಂದಾಜು 50 ಮೀಟರ್ ಉದ್ದನೆಯ ಸಿಮೆಂಟ್ ಪೈಪ್ ಅಳವಡಿಸಿ ಒಂಬತ್ತು ಅಡಿ ಅಗಲದ ಸೇತುವೆ ನಿರ್ಮಾಣ ಮಾಡಬೇಕು. ಒಂದುವೇಳೆ ರಸ್ತೆ ನಿರ್ಮಾಣ ಮಾಡುವುದಾದರೆ 100 ಮೀಟರ್ ಕಾಮಗಾರಿಯ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಎನ್.ಮುಕ್ರಿ, ನಾರಾಯಣ ಟಿ.ಮುಕ್ರಿ, ನಾಗು ಮಾರು ಮುಕ್ರಿ, ನಾರಾಯಣ ನಾಗು ಮುಕ್ರಿ, ಮಾರು ನಾಗು ಮುಕ್ರಿ, ಗಣಪತಿ ನಾಗು ಮುಕ್ರಿ, ದೇವು ಮಾಸ್ತಿ ಮುಕ್ರಿ, ಗಣೇಶ ಎನ್.ಮುಕ್ರಿ, ದಯಾನಂದ ಜಿ.ಮುಕ್ರಿ, ಪ್ರೇಮಾ ಎನ್.ಮುಕ್ರಿ, ಲಕ್ಷ್ಮಿ ಎನ್.ಮುಕ್ರಿ, ಅನ್ನಪೂರ್ಣಾ ಎಂ.ಮುಕ್ರಿ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.