ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕಳಚೆಗೆ ಸದ್ಯಕ್ಕಂತೂ ರಸ್ತೆ ಸಂಪರ್ಕ ಕಷ್ಟಸಾಧ್ಯ: ದೂರವಾಣಿ, ವಿದ್ಯುತ್ ನೀಡಲು ಹರಸಾಹಸ

ಧರೆ ಕುಸಿದಾಗ...: ಇಲ್ಲದ ಹಾದಿಯ ಹುಡುಕುವ ಸಂಕಟ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಭೂ ಕುಸಿತದಿಂದ ನಲುಗಿರುವ ಯಲ್ಲಾಪುರ ತಾಲ್ಲೂಕಿನ ಕಳಚೆಗೆ ಒಂದು ವಾರದಿಂದ ಹೊರ ಜಗತ್ತಿನ ಸಂಪರ್ಕವಿಲ್ಲ. ಗ್ರಾಮಕ್ಕಿದ್ದ ಏಕೈಕ ರಸ್ತೆಯ ಕುರುಹೂ ಇಲ್ಲದಂತೆ ಬೃಹತ್ ಕಂದಕ ಉಂಟಾಗಿದೆ. ಈಗ ವಾಹನಗಳ ಸಂಚಾರವಿರಲಿ, ನಡೆದುಕೊಂಡು ಹೋಗಲೂ ಸರಿಯಾದ ದಾರಿಯಿಲ್ಲದಂತಾಗಿದೆ.

ಕಳಚೆಗೆ ರಾಷ್ಟ್ರೀಯ ಹೆದ್ದಾರಿ 63ರ ಮೂಲಕ ಸಂಪರ್ಕ ನೀಡುವ ಕೈಗಾ– ಇಳಕಲ್ ರಾಜ್ಯ ಹೆದ್ದಾರಿ 6ರಲ್ಲಿ, ತಳಕೇಬೈಲ್ ಬಳಿ ಗುಡ್ಡ ಕುಸಿದಿದೆ. ಇಲ್ಲಿ 100 ಮೀಟರ್‌ಗೂ ಅಧಿಕ ಧರೆ ಪ್ರಪಾತ ಸೇರಿದ್ದು, ಪರ್ಯಾಯ ರಸ್ತೆ ನಿರ್ಮಿಸುವ ತನಕ ವಾಹನ ಸಂಚಾರ ಸಾಧ್ಯವಿಲ್ಲ. ಹಾಗಾಗಿ ದಿನಸಿ, ಹಾಲು, ತರಕಾರಿ, ದಿನ ಪತ್ರಿಕೆ, ಅಡುಗೆ ಅನಿಲದ ಸಿಲಿಂಡರ್ ಮುಂತಾದ ಎಲ್ಲ ಸಾಮಗ್ರಿ ಪೂರೈಕೆ ಸ್ಥಗಿತವಾಗಿದೆ.

ಬೆಟ್ಟಗಳ ಮಧ್ಯೆ ತೋಟಗಳಲ್ಲಿ ಒಂಟಿ ಮನೆಗಳಿವೆ. ತಲೆ ಹೊರೆಯಲ್ಲಾದರೂ ಅಗತ್ಯ ಸಾಮಗ್ರಿ ತರಲು ಕಾಲುದಾರಿಗಳೂ ಇಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಹೆಬ್ಬಾರ ಕುಂಬ್ರಿಯಿಂದ ಕಳಚೆ ಸೊಸೈಟಿವರೆಗೆ ಕಾಂಕ್ರೀಟ್‌ನ ದಾರಿ ಮಾಡಿಸಿ ಕೊಟ್ಟಿದ್ದರು. ಊರಿನ ಮಧ್ಯಭಾಗದಲ್ಲಿ, ಗುಡ್ಡದಿಂದ ಗುಡ್ಡಕ್ಕೆ ಅದುವೇ ಜೀವನಾಡಿಯಾಗಿತ್ತು. ಭೂ ಕುಸಿತದ ಬಳಿಕ ಅಲ್ಲಲ್ಲಿ ಕುರುಹುಗಳು ಮಾತ್ರ ಉಳಿದುಕೊಂಡಿವೆ.

ಕಳಚೆ, ದೇವಸ್ಥಾನ ಕೇರಿ, ಭಾಗ್ವತ ಕೇರಿ, ಅಂಬಡೆಕೇರಿ, ಸೂತ್ರೆಮನೆ, ಮಾವಯ್ಯನಮನೆ, ಸೊಸೈಟಿಕೇರಿ, ಅಪ್ರತೋಟ, ಹಳ್ಳಿಕೇರಿ, ಈರಾಪುರ ಈ ರೀತಿ 19 ಮಜಿರೆಗಳು ಇಲ್ಲಿವೆ. ಈಗ ಅವುಗಳೆಲ್ಲವೂ ದ್ವೀಪಗಳಂತಾಗಿವೆ.

ದೂರವಾಣಿಯಿಲ್ಲ: ಇಲ್ಲಿನ ಮನೆಗಳಿಗೆ ಬಿ.ಎಸ್.ಎನ್‌.ಎಲ್ ಸ್ಥಿರ ದೂರವಾಣಿ ಹಾಗೂ ಊರಿನಲ್ಲಿ ಮೊಬೈಲ್ ಟವರ್ ಸಂಪರ್ಕವಿತ್ತು. ಧರೆ ಕುಸಿದು ಕೇಬಲ್ ತುಂಡಾಗಿದ್ದು, ಸಿಗ್ನಲ್ ಸ್ಥಗಿತಗೊಂಡಿದೆ. ಅಲ್ಲೆಲ್ಲೋ ಬೆಟ್ಟದ ಮೇಲೆ ಒಂದೆರಡು ಕಡೆ ಜೊಯಿಡಾದ ಉಳವಿ ಟವರ್‌ನಿಂದ ಅರೆಬರೆ ಸಿಗ್ನಲ್‌ ಸಿಗುತ್ತದೆ. ಅದಕ್ಕಾಗಿ ತಡಕಾಡುವುದು ಸಾಮಾನ್ಯವಾಗಿದೆ.

ಕರೆ ಸ್ವೀಕರಿಸಿದ ಕೂಡಲೇ ಅತ್ಯಂತ ಸಂಕ್ಷಿಪ್ತವಾಗಿ ಮಾತನಾಡಿ, ಮೊಬೈಲ್ ಫೋನ್ ಬ್ಯಾಟರಿ ಚಾರ್ಜ್ ಉಳಿಸಿಕೊಳ್ಳುವ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ. ಕೆಲವರು ಯಲ್ಲಾಪುರದಿಂದ ಜನರೇಟರ್ ತಂದು ತಲೆಹೊರೆಯಲ್ಲೇ ಮನೆಗೆ ಸಾಗಿಸಿದ್ದಾರೆ. ‘ಮಕ್ಕಳು ಬೇರೆ ಊರಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಯೋಗಕ್ಷೇಮ ತಿಳಿಸಲಾದರೂ ಮೊಬೈಲ್ ಫೋನ್ ಬೇಕು. ಹಾಗಾಗಿ ಈ ಸಾಹಸ ಅನಿವಾರ್ಯ’ ಎಂದು ವಿಷಾದದ ನಗು ಬೀರುತ್ತಾರೆ.

ಅಂಚೆಯೂ ಇಲ್ಲ: ಕಳಚೆಯಲ್ಲಿ ಅಂಚೆ ಕಚೇರಿಯು ಸುಮಾರು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮಕ್ಕೆ ಬರುತ್ತಿದ್ದ ಬಸ್‌ಗಳಲ್ಲಿ ಅಂಚೆ ಸಾಮಗ್ರಿ ರವಾನಿಸಲಾಗುತ್ತಿತ್ತು. ಈಗ ಬಸ್ ಸಂಚಾರ ಸಾಧ್ಯವಾಗದ ಕಾರಣ ಅಂಚೆ ವ್ಯವಹಾರಕ್ಕೆ 10 ಕಿಲೋಮೀಟರ್ ದೂರದ ವಜ್ರಳ್ಳಿಗೇ ಬರಬೇಕಿದೆ.

ಕೃಷಿಗೆ ತೊಂದರೆ: ಕಳಚೆಯ ಹಲವರು, ಮತ್ತೊಂದು ತುದಿಯಾದ ಈರಾಪುರದಲ್ಲಿ ಗದ್ದೆ ವ್ಯವಸಾಯ ಮಾಡುತ್ತಿದ್ದಾರೆ. ಹಲವರ ತೋಟ ನಾಶವಾಗಿದ್ದರೆ, ಗದ್ದೆ ಉಳಿದುಕೊಂಡಿದೆ. ಅದರ ಪರಿಸ್ಥಿತಿಯನ್ನು ನೋಡಲು ಹೋಗಲೂ ಈಗ ದಾರಿಯಿಲ್ಲ.

ಗ್ರಾಮಕ್ಕೆ ಬೀಗಾರ ಬಾಗಿನಕಟ್ಟೆ ಮತ್ತು ತಡಿಕೆ ಬೈಲು ಬಳಿಯಿಂದ ಎರಡು ಪರ್ಯಾಯ ರಸ್ತೆಗಳ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ. ಹೆಸ್ಕಾಂನ ‍15 ಸಿಬ್ಬಂದಿಯ ತಂಡ ಅವಿರತ ಶ್ರಮಿಸುತ್ತಿದ್ದು, ಈರಾಪುರ ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ವ್ಯವಹಾರ ಕೇಂದ್ರ ಅನಾಥ:

ತಳಕೆಬೈಲ್‌ನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಹೆಬ್ಬಾರಕುಂಬ್ರಿಯಿದೆ. ಐದು ಕಿಲೋಮೀಟರ್ ದೂರದಲ್ಲಿ, ಕೊಡಸಳ್ಳಿ ಜಲಾಶಯದ ಪ್ರದೇಶವು ಗ್ರಾಮದ ವ್ಯವಹಾರ ಕೇಂದ್ರವಾಗಿದೆ.

‍ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಸ್ಥಾನ, ಶಾಲೆ, ಸಹ್ಯಾದ್ರಿ ಸೇವಾ ಸಹಕಾರ ಸಂಘ, ಯುವಕ ಸಂಘ ಎಲ್ಲವೂ ಈ ಭಾಗದಲ್ಲಿವೆ. ಇವೆಲ್ಲವನ್ನೂ ಸಂಪರ್ಕದಲ್ಲಿ ಪೋಣಿಸಿದ್ದ ಸರ್ವಋತು ರಸ್ತೆ ಈಗ ಹುಡುಕಿದರೂ ಸಿಗುವುದಿಲ್ಲ. ಹೆಬ್ಬಾರಕುಂಬ್ರಿಯ ಬಳಿ ರಸ್ತೆಯ ತಿರುವಿನಲ್ಲಿ ಸುಮಾರು 30 ಮೀಟರ್ ಆಳದ ಕಂದಕ ಉಂಟಾಗಿದೆ. ಅಲ್ಲಿಂದ ಮುಂದೆ ಎಲ್ಲವನ್ನೂ ಆಪೋಶನ ಪಡೆಯುತ್ತ ಹಳ್ಳ ನಿರ್ಮಾಣವಾಗಿದೆ.

–––––

* ಮೇ, ಜೂನ್ ತಿಂಗಳಲ್ಲಿ ಕಳಚೆ ಹಾಗೂ ಈರಾಪುರದಲ್ಲಿ ಡಾಂಬರು, ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ₹ 2.5 ಕೋಟಿ ಅನುದಾನದ ಕಾಮಗಾರಿ ಈಗ ಸಂಪೂರ್ಣ ನಾಶವಾಗಿದೆ.

– ತಿಮ್ಮಣ್ಣ ವಿ.ಗಾಂವ್ಕರ್, ಈರಾಪುರ ವಾರ್ಡ್ ಸದಸ್ಯ

* ಭೂ ಕುಸಿತದಿಂದಾಗಿ ವಿದ್ಯುತ್ ಕಂಬಗಳು ಇಕ್ಕಟ್ಟಾದ ಪ್ರದೇಶಗಳಲ್ಲಿವೆ. ಗರಿಷ್ಠ 15 ಜನರಷ್ಟೇ ಕೆಲಸ ಮಾಡಲು ಸಾಧ್ಯವಿದೆ. ಎಲ್ಲ ಸಾಮಗ್ರಿಯನ್ನು ತಲೆ ಹೊರೆಯಲ್ಲೇ ತರಲಾಗುತ್ತಿದೆ.

– ಮೇಘರಾಜ ಎಂ.ಪಿ, ಹೆಸ್ಕಾಂ ಎ.ಇ.ಇ, ಯಲ್ಲಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು