ಮಂಗಳವಾರ, ಮಾರ್ಚ್ 21, 2023
20 °C
ಶಿರೂರು ಹಿರಿಯ ಪ್ರಾಥಮಿಕ ಶಾಲೆಯೆದುರು ಆಕ್ರೋಶ

ಅಂಕೋಲಾ: ಶಿಕ್ಷಕಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಶಿಕ್ಷಣ ಇಲಾಖೆಯ ಆದೇಶದಂತೆ ಮೂಲ ಶಾಲೆಗೆ ಹಾಜರಾಗುವುದನ್ನು ಖಂಡಿಸಿ, ಶಿರೂರು ಗ್ರಾಮಸ್ಥರು ಶಿಕ್ಷಕಿ ಪ್ರೇಮಬಾಯಿ ನಾಯಕ ವಿರುದ್ಧ ಗುರುವಾರ ಶಾಲೆಯೆದುರು ಪ್ರತಿಭಟನೆ ನಡೆಸಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ನಿಯೋಜನೆ ಮೇರೆಗೆ ಬೇರೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮೂಲ ಶಾಲೆಗೆ ಹಾಜರಿರಬೇಕು ಎಂದು ಶಿಕ್ಷಣ ಇಲಾಖೆ ಈಚೆಗೆ ಆದೇಶ ನೀಡಿತ್ತು. ಶಿರೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಪ್ರೇಮಬಾಯಿ ನಾಯಕ ಕಾರ್ಯ ನಿರ್ವಹಿಸುತ್ತಿದ್ದರು.

ನೆರೆಹಾವಳಿ ಸಂದರ್ಭ ಅವ್ಯವಹಾರ ನಡೆಸಿದ್ದಾರೆ, ಶಾಲೆಯ ಬಾವಿಗೆ ಬೀಗ ಹಾಕಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ತಾಲ್ಲೂಕಿನ ಹೊಸಗದ್ದೆಯ ಶಾಲೆಗೆ ಅವರನ್ನು ನಿಯೋಜನೆ ಮಾಡಲಾಗಿತ್ತು. ಶಿಕ್ಷಣ ಇಲಾಖೆಯ ಹೊಸ ಆದೇಶದ ಪ್ರಕಾರ ಪ್ರೇಮಬಾಯಿ ಗುರುವಾರ ಮತ್ತೆ ಶಿರೂರು ಶಾಲೆಯ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು ಬಿ.ಇ.ಒ ಸಮ್ಮುಖದಲ್ಲಿ ಚರ್ಚಿಸಿ ಶಾಲೆಗೆ ಹಾಜರಾಗುವಂತೆ ಶಿಕ್ಷಕಿಗೆ ಹೇಳಿದ್ದರು.

ಗುರುವಾರ ಮುಂಜಾನೆ ಕರ್ತವ್ಯಕ್ಕೆ ಹಾಜರಾದ ಶಿಕ್ಷಕಿ ಪ್ರೇಮಬಾಯಿ, ‘ಶಿರೂರಿನ ಕೆಲವು ಗ್ರಾಮಸ್ಥರು ತಮಗೆ ಮಾನಸಿಕ ಒತ್ತಡ ನೀಡುತ್ತಿದ್ದಾರೆ. ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ’ ಮುಖ್ಯ ಶಿಕ್ಷಕರಿಗೆ ಪತ್ರ ಬರೆದು ಶಾಲೆಯಿಂದ ತೆರಳಿದ್ದಾರೆ. ಈ ಸಂಗತಿ ತಿಳಿದ ಗ್ರಾಮಸ್ಥರು ಶಿಕ್ಷಕಿಯ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಶಿಕ್ಷಕಿ ಈ ಶಾಲೆಗೆ ಬರಬಾರದು ಎಂದು ಆಗ್ರಹಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಗಾಂವಕರ ಮನವಿ ಸ್ವೀಕರಿಸಿದ್ದಾರೆ.

‘ಶಿಕ್ಷಕಿಯ ಪ್ರೇಮಬಾಯಿ ವಿರುದ್ಧ ಹಿಂದೆ ಹಲವು ಆರೋಪಗಳು ಕೇಳಿಬಂದಿದ್ದವು. ತಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚೆಕ್ ಪಡೆದುಕೊಂಡಿದ್ದರ ಕುರಿತು ಅವರು ತನಿಖೆ ಎದುರಿಸುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ತನಿಖೆ ವಿಳಂಬವಾಗಿದೆ. ಘಟನೆಯ ಕುರಿತು ಉಪನಿರ್ದೇಶಕರಿಗೆ ಸಮಗ್ರ ವರದಿ ಒಪ್ಪಿಸುತ್ತೇನೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕುರಿತು ಮಾಹಿತಿ ಇಲ್ಲ’ ಎಂದು ಬಿ.ಇ.ಒ ಶಾಮಲಾ ನಾಯಕ ತಿಳಿಸಿದರು.

‘ಸಮಸ್ಯೆ ಪರಿಹಾರಕ್ಕೆ ಯತ್ನ’: ‘ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ತಿಳಿದುಬರುತ್ತದೆ. ಗ್ರಾಮಸ್ಥರ ಪ್ರತಿಭಟನೆಯ ಕುರಿತು ಗಮನಕ್ಕೆ ಬಂದಿದೆ. ಶಿಕ್ಷಣಾಧಿಕಾರಿ ಮೂಲಕ ವರದಿ ಪಡೆದು ಒಂದು ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ’ ಎಂದು ಡಿ.ಡಿ.ಪಿ.ಐ ಹರೀಶಕುಮಾರ್ ಗಾಂವ್ಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಕ್ಷಕಿ ಪ್ರೇಮಬಾಯಿ ನಮ್ಮ ಶಾಲೆಗೆ ಹಾಜರಾಗುವುದು ಗ್ರಾಮಸ್ಥರಿಗೆ ಒಪ್ಪಿಗೆಯಿಲ್ಲ. ಇದೇ ಶಾಲೆಯಲ್ಲಿ ಮುಂದುವರಿದರೆ ನಮ್ಮ ಪ್ರತಿಭಟನೆ ನಿರಂತರವಾಗಿರುತ್ತದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬೀರ ಗೌಡ ತಿಳಿಸಿದರು.

ಶಿಕ್ಷಕಿ ಪ್ರೇಮಬಾಯಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಬೆಳೆಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯಮ್ಮ ಗೌಡ, ಸದಸ್ಯರಾದ ಅನಂತ ನಾಯ್ಕ, ಗಣೇಶ ಗೌಡ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು