ಮಂಗಳವಾರ, ಅಕ್ಟೋಬರ್ 27, 2020
22 °C

ಹಳ್ಳ ದಾಟಲು ಗ್ರಾಮಸ್ಥರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರ್ವೆಯಲ್ಲಿ ನಾರಾಯಣ ದೇವರ ದರ್ಶನವನ್ನು ಪಡೆಯಲು  ಗ್ರಾಮಸ್ಥರು ಭರ್ತಿಯಾಗಿ ಹರಿಯುವ ಹಳ್ಳವನ್ನು ನಡೆದುಕೊಂಡು ದಾಟಬೇಕಿದೆ.

ಗ್ರಾಮಕೇಂದ್ರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಶಿರ್ವೆಯಲ್ಲಿ ಹಾಲಕ್ಕಿ ಒಕ್ಕಲಿಗರು, ಇತರ ಸಮಾಜದವರು ಸೇರಿದಂತೆ 150 ಮನೆಗಳಿವೆ. ಅಂದಾಜು 800 ಜನರಿದ್ದಾರೆ. ಈ ಗ್ರಾಮದವರಿಗೆ ನಾರಾಯಣ ದೇವ ಗ್ರಾಮ ದೇವರು.

‘ಹಳ್ಳಕ್ಕೆ ಬಹಳ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿದೆ. ಆದರೆ, ಅದರಲ್ಲಿ ದ್ವಿಚಕ್ರ ವಾಹನದಲ್ಲೂ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜು ಸಮಯದಲ್ಲಿ ಹಳ್ಳ ದಾಟಲು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಯಾರಿಗದಾರೂ ಅನಾರೋಗ್ಯವಾದರೆ ಹಳ್ಳ ದಾಟಿ ಬರಲು ತುಂಬ ಕಷ್ಟ ಪಡಬೇಕಾಗುತ್ತದೆ’ ಎಂದು ದೇವಳಮಕ್ಕಿಯ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಭಾರಿ ಮಳೆಯಿಂದ ಶಿರ್ವೆಯ ಹಳ್ಳ ತುಂಬಿ ಹರಿಯುತ್ತಿದೆ. ಈಗ ಹಬ್ಬ ಹರಿದಿನಗಳು ಶುರುವಾಗುತ್ತಿದ್ದು, ಹಳ್ಳ ದಾಟಿ ಹೋಗಿ ದೇವರ ದರ್ಶನವನ್ನು ಪಡೆಯಲು ಬಹಳ ತೊಂದರೆಯಾಗುತ್ತಿದೆ. ಹಿರಿಯರು ಹಾಗೂ ಮಹಿಳೆಯರ ಕೈ ಹಿಡಿದು ಹಳ್ಳ ದಾಟಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಘನಶ್ಯಾಮ ಗೌಡ, ಸಂತೋಷ ಗುನಗಿ, ಶ್ರೀಪಾದ ಗೌಡ, ರಾಮಾ ಗೌಡ, ತುಕ್ಕು ಗೌಡ ಅಳಲು ತೋಡಿಕೊಂಡಿದ್ದಾರೆ.

ಈ ಹಳ್ಳಕ್ಕೆ ಸಮರ್ಪಕವಾದ ಸೇತುವೆ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.