ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕಡ್ಡಾಯ

ಏ.4ರ ನಂತರ ಕಡ್ಡಾಯ ಪರೀಕ್ಷೆ: ವಿದೇಶಗಳಿಂದ ಮರಳುವವರಿಗೆ ಸರ್ಕಾರಿ ಕ್ವಾರಂಟೈನ್
Last Updated 1 ಮೇ 2020, 11:46 IST
ಅಕ್ಷರ ಗಾತ್ರ

ಕಾರವಾರ: ‘ಏಪ್ರಿಲ್ ನಾಲ್ಕರ ನಂತರ ಜಿಲ್ಲೆಗೆ ಹೊರಗಿನಿಂದ ಬರುವ ಎಲ್ಲರಿಗೂ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ. ವಿದೇಶಗಳಿಂದ ಮರಳುವ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ಇಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆರಂಭಿಸಲಾಗಿರುವ ‘ಕೋವಿಡ್ 19 ವಾರ್ಡ್‌’ನ ಕಾರ್ಯ ನಿರ್ವಹಣೆಯ ಬಗ್ಗೆ ಶುಕ್ರವಾರ ಹಮ್ಮಿಕೊಳ್ಳಲಾದ ಪ್ರಾತ್ಯಕ್ಷಿಕೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಇನ್ನು ಮುಂದೆ ಜಿಲ್ಲೆಯ ಕೋವಿಡ್ 19 ಪೀಡಿತರಿಗೆನೂತನವಾಗಿ ನಿರ್ಮಿಸಲಾದ ವಾರ್ಡ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರ ತಂಡವೇ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿದೆ.ನೌಕಾಪಡೆಯ ಐ.ಎನ್.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಇರುವ ಎಲ್ಲ ಸೌಲಭ್ಯಗಳೂ ಇಲ್ಲಿವೆ. ಅಲ್ಲಿಯೂ ನಮ್ಮ ಸರ್ಕಾರಿ ವೈದ್ಯರೇ ಚಿಕಿತ್ಸೆ ನೀಡಿದ್ದರು’ ಎಂದು ತಿಳಿಸಿದಿರು.

‘ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇತರ ರೋಗಿಗಳಿಗೆ ತೊಂದರೆ ಆಗದಂತೆ ಈ ವಾರ್ಡ್ ಅನ್ನು ಪ್ರತ್ಯೇಕವಾಗಿ ಇಡಲಾಗಿದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಇತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆ ಎಂದಿನಂತೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಕಾನೂನು ಕ್ರಮದ ಎಚ್ಚರಿಕೆ:‘ಇನ್ನು ಮುಂದೆ ಸಾರ್ವಜನಿಕರು ಹೊರಗೆ ಬರುವಾಗ ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಉದ್ದೇಶ ಪೂರ್ವಕವಾಗಿ ನಿಯಮ ಉಲ್ಲಂಘಿಸುವವರ ಕ್ವಾರಂಟೈನ್ ಖರ್ಚನ್ನು ಅವರಿಂದಲೇ ಭರಿಸಲಾಗುತ್ತದೆ. ಉಳಿದಂತೆ ಕಾನೂನು ಕ್ರಮ ಕೈಗೊಳ್ಳಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ.

‘ಮುಖಗವಸು ಧರಿಸುವ ಮೂಲಕ ವ್ಯಕ್ತಿಯು ತನ್ನ ಹಾಗೂ ಇಡೀ ಸಮುದಾಯದ ರಕ್ಷಣೆ ಮಾಡಬೇಕು. ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಜಿಲ್ಲೆಗೆಹೊರಗಿನಿಂದ ಬಂದವರು ಹಾಗೂ ನೆರೆಹೊರೆಯವರಿಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಇಂದು ನಿರ್ಣಯ: ‘ನಾಲ್ಕನೇ ತಾರೀಕಿನ ನಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವು ಮತ್ತು ಯಾವ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಲಾಗುತ್ತದೆ ಎಂಬ ಬಗ್ಗೆ ಜಿಲ್ಲಾಉಸ್ತುವಾರಿ ಸಚಿವರು ನಿರ್ಧಾರ ತಿಳಿಸಲಿದ್ದಾರೆ. ಈ ಸಂಬಂಧ ಏ.2ರಂದು ಅವರೊಂದಿಗೆ ಸಭೆಯಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಕೋವಿಡ್ 19 ವಾರ್ಡ್‌ಗೆ ಸಂಪೂರ್ಣ ಬಂದೊಬಸ್ತ್ ನೀಡಲಾಗುತ್ತದೆ.ಅಲ್ಲಿಗೆಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೇ ಹೊರಗಿನಿಂದ ಬರುವವರ ಪರಿಶೀಲನೆಗೆ ಜಿಲ್ಲೆಯ ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಮತ್ತಷ್ಟು ನಿಗಾ ವಹಿಸಲಾಗುತ್ತದೆ. ಜೊತೆಗೇ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ನೂತನ ವಾರ್ಡ್ ಎಲ್ಲ ವೈರಸ್ ಸೋಂಕುಗಳ ಚಿಕಿತ್ಸೆಗೂ ಬಳಕೆಯಾಗಲಿದೆ. ಇದರ ಶಾಶ್ವತ ಬಳಕೆಗೆಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಒಪ್ಪಿಗೆ ನೀಡಿದೆ. ಗಂಟಲುದ್ರವದ ಮಾದರಿ ಪರೀಕ್ಷೆಯ ಪ್ರಯೋಗಾಲಯವು ಇನ್ನೊಂದು ವಾರದಲ್ಲಿ ಸಿದ್ಧವಾಗಲಿದೆ’ ಎಂದು ತಿಳಿಸಿದರು.

ಸಂಸ್ಥೆಯ ಡಾ.ಹೇಮಗಿರಿ, ಡಾ.ವಿ.ಎನ್.ವೆಂಕಟೇಶ್ ಹಾಗೂ ಡಾ.ಮಂಜುನಾಥ್ ಕೋವಿಡ್ 19 ಪೀಡಿತರ ಪರೀಕ್ಷೆ ಮತ್ತು ಚಿಕಿತ್ಸೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್, ಸಂಸ್ಥೆಯ ಡೀನ್ ಡಾ.ಗಜಾನನ ನಾಯಕ ಹಾಗೂ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT