ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಾ ಜಲಾಶಯ ಭರ್ತಿ‌: ಕಾಳಿ ನದಿಗೆ ನೀರು

ಮಳೆಗಾಲದ ಆರಂಭದಲ್ಲೇ ಭರ್ತಿಯಾದ ಅಣೆಕಟ್ಟೆ
Last Updated 19 ಜೂನ್ 2021, 10:08 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯವು ಭರ್ತಿಯಾಗಿದ್ದು, ಶನಿವಾರ ಮೂರು ಕ್ರಸ್ಟ್‌ಗೇಟ್‌ಗಳ ಮೂಲಕ ಕಾಳಿ ನದಿಗೆ 5,500 ಕ್ಯುಸೆಕ್‌ಗಳಷ್ಟು ನೀರನ್ನು ಹರಿಸಲಾಯಿತು. ನದಿಪಾತ್ರದ ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ರಾಜ್ಯ ವಿದ್ಯುತ್ ನಿಗಮವು ಈಗಾಗಲೇ ಸೂಚನೆ ನೀಡಿತ್ತು.

34.50 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಮಧ್ಯಾಹ್ನ 1.45ರ ಸುಮಾರಿಗೆ 31.50 ಮೀಟರ್ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನೀರು ಸಂಗ್ರಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಅನುಮತಿ ನೀಡಿದೆ. 2019ರಲ್ಲಿ ಉಂಟಾದ ಪ್ರವಾಹದ ಬಳಿಕ ಕ್ರಮವನ್ನು ಅನುಸರಿಸಲಾಗುತ್ತಿದೆ.

ಇದು ಕಾಳಿ ನದಿಯ ಕೊನೆಯ ಜಲಾಶಯವಾಗಿದ್ದು, ನದಿಯ ಆರಂಭದಲ್ಲೇ ಇರುವ ‘ಸೂಪಾ’ ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾಗಿದೆ. ಜಲಾಶಯದ ಸುತ್ತಮುತ್ತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೂಪಾಕ್ಕೂ ಒಳಹರಿವು ಹೆಚ್ಚಾಗಿದೆ.

ಈ ವರ್ಷ ಕೋವಿಡ್ ಲಾಕ್‌ಡೌನ್ ಕಾರಣದಿಂದ ಕಡು ಬೇಸಿಗೆಯಲ್ಲೂ ಜಲವಿದ್ಯುತ್‌ಗೆ ಬೇಡಿಕೆ ಕುಸಿದಿತ್ತು. ಸಾಮಾನ್ಯವಾಗಿ ಏಪ್ರಿಲ್ – ಮೇ ತಿಂಗಳಲ್ಲಿ 250ರಿಂದ 260 ಮಿಲಿಯನ್ ಯೂನಿಟ್‌ಗಳಷ್ಟು (ಎಂ.ಯು) ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ವರ್ಷ ಬೇಡಿಕೆಯು 200 ಮಿಲಿಯನ್ ಯೂನಿಟ್‌ಗಿಂತಲೂ ಕಡಿಮೆಯಾಗಿತ್ತು. ಹಾಗಾಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಹೆಚ್ಚಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕದ್ರಾ ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ನಮ್ಮ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಭಾರಿ ಮಳೆಯಾಗುವುದಿಲ್ಲ. ಆದರೆ, ಈ ಬಾರಿ ಚಂಡಮಾರುತದಿಂದಾಗಿ ಉತ್ತಮ ಮಳೆಯಾಗಿದೆ. ಹಾಗಾಗಿ ಮಳೆಗಾಲದ ಆರಂಭದಲ್ಲೇ ಅಲ್ಲಲ್ಲಿ ನೆರೆಯ ಸಾಧ್ಯತಗಳನ್ನು ಗುರುತಿಸಲಾಗಿದೆ. ಅದನ್ನು ಎದುರಿಸಲು ಸಿದ್ಧತೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಕಾಳಿ ನದಿಯ ಜಲಾಶಯಗಳಿಗೆ ಒಳಹರಿವು ಎಷ್ಟು ಪ್ರಮಾಣದಲ್ಲಿ ಇದೆಯೋ ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕದ್ರಾದಲ್ಲಿ ಪ್ರಸ್ತುತ 21 ಸಾವಿರ ಕ್ಯುಸೆಕ್ ನೀರನ್ನು ವಿದ್ಯುತ್ ಉತ್ಪಾದಿಸಿ ಹಾಗೂ ಗೇಟ್‌ಗಳಿಂದ ಹೆಚ್ಚುವರಿಯಾಗಿ ಐದಾರು ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಕೆಳಭಾಗದಲ್ಲಿ ಸಮಸ್ಯೆಯಿಲ್ಲ. ಆದರೂ ಪ್ರತಿ ಹಂತದಲ್ಲೂ ನಿರಂತರವಾಗಿ ಗಮನ ಹರಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT