ಕುಮಟಾ:ಕುಮಟಾ–ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಮರಾಕಲ್ ಯೋಜನೆಯ ಅಘನಾಶಿನಿ ನದಿಯಲ್ಲಿ ಈ ವರ್ಷ ಹಿಂದೆಂದಿಗಿಂತ ಅಧಿಕ ನೀರು ಕಡಿಮೆಯಾಗಿದೆ.ಸ್ಥಳೀಯ ಪುರಸಭೆಯು ಭರವಸೆ ನೀಡಿದಂತೆ ನಿತ್ಯ ನೀರು ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಅಘನಾಶಿನಿ ನದಿ ಸುತ್ತಲಿನ ಪ್ರದೇಶದಲ್ಲಿ ಒಂದೆರಡು ಮಳೆಯಾಗಬೇಕಿತ್ತು. ಆಗ ನದಿಗೆ ನೀರು ಹರಿದು ಜೂನ್‌ವರೆಗೆ ಅಗತ್ಯವಿರುವಷ್ಟು ಕುಡಿಯುವ ನೀರು ಸಂಗ್ರಹವಾಗುತ್ತಿತ್ತು. ಆದರೆ, ಇಲ್ಲಿ ಮೋಡ ಕಟ್ಟಿದರೂ ಮಳೆ ನಿರೀಕ್ಷೆ ಹುಸಿಯಾಗಿದೆ. ಎರಡು ವರ್ಷಗಳ ಹಿಂದೆ ಪಟ್ಟಣಕ್ಕೆ ನೀರಿನ ತೀವ್ರ ಕೊರತೆ ಉಂಟಾದಾಗ₹ 15 ಲಕ್ಷ ವೆಚ್ಚದಲ್ಲಿ ಮರಾಕಲ್ ಬಳಿ ಅಘನಾಶಿನಿ ನದಿಗೆ ಮೂರು ಮೀಟರ್ ಎತ್ತರದ ಒಡ್ಡು ಕಟ್ಟಿ ನೀರು ಸಂಗ್ರಹಿಸಲಾಗಿತ್ತು. ಹಿಂದೆಲ್ಲ ಒಡ್ಡಿನಾಚೆ ತುಂಬಿ ಹರಿಯುತ್ತಿದ್ದ ನದಿ ನೀರು ಈಗ ಒಡ್ಡಿನ ತಳ ಮುಟ್ಟಿದೆ.
ಮರಾಕಲ್, ಮಾಸ್ತಿಮನೆ ಆಚೆ ದೊಡ್ಡಮನೆ ಘಟ್ಟ ಆರಂಭವಾಗುವ ಎತ್ತರದ ಗುಡ್ಡದಿಂದ ಕೆಳಗೆ ಅಘನಾಶಿನಿ ನದಿ ಪಾತಳಿಯಲ್ಲಿ ಎಂಥ ಬೇಸಿಗೆಯಲ್ಲೂ ಕೊಂಚ ನೀರಿರುತ್ತಿತ್ತು. ಪ್ರವಾಸಿಗರು ಅಲ್ಲಿ ಸ್ನಾನಕ್ಕೆ ತೆರಳುತ್ತಿದ್ದರು. ಈ ವರ್ಷ ನದಿಯ ಇಳಿಜಾರು ಪ್ರದೇಶದ ಕೆಳಗೆ ಅಲ್ಲಲ್ಲಿ ಹೊಂಡದಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಕಾಣುತ್ತಿದೆ.ನದಿ ಪಾತಳಿ ಖಾಲಿ ಹೆದ್ದಾರಿಯಂತೆ ಗೋಚರಿಸುತ್ತಿದೆ.
ನೀರಿನ ಕೊರತೆಯ ಹಿನ್ನೆಲೆಯಲ್ಲಿ ಕುಮಟಾ–ಹೊನ್ನಾವರ ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ ನೀರು ಕೊಡುವುದಾಗಿ ಪುರಸಭೆ ಪ್ರಚಾರ ಮಾಡಿತ್ತು. ಆದರೆ, ಶಾಸಕ ದಿನಕರ ಶೆಟ್ಟಿ, ‘ಕುಮಟಾದಲ್ಲಿ ನೀರಿನ ಸಮಸ್ಯೆ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಬೇಸಿಗೆಯಲ್ಲಿ ಜನರಿಗೆ ನಿತ್ಯ ನೀರು ಕೊಡಬೇಕು’ ಎಂದು ಪಟ್ಟು ಹಿಡಿದಾಗ ಪುರಸಭೆ ಸಮ್ಮತಿಸಿದೆ.
‘ಅಧಿಕಾರಿಗಳ ಸಭೆ ಕರೆದು ಚರ್ಚೆ’:‘ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿರುವುದರಿಂದ ನೀರು ಪೂರೈಸುವ ಅಘನಾಶಿನಿ ನದಿ ಬರಿದಾಗುತ್ತಿದೆ. ಇನ್ನು ಮುಂದೆ ಸಾಧ್ಯವಾದ ಕಡೆಗಳಲ್ಲಿ ನೀರಿಂಗಿಸುವ, ಮಳೆಗಾಲದಲ್ಲಿ ಹರಿಯುವ ನೀರನ್ನು ತಡೆಯುವ ಚೆಕ್ ಡ್ಯಾಂ ನಿರ್ಮಾಣದಂಥ ಶಾಶ್ವತ ಪರಿಹಾರ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ. ಶಿರಸಿ ತಾಲ್ಲೂಕು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ ನೀರಿನ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಈ ಬಗ್ಗೆ ಅರಣ್ಯ, ಕಂದಾಯ, ಕೃಷಿ, ಜಲಾನಯನ ಮುಂತಾದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ದಿನಕರ ಶೆಟ್ಟಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.