‘ಸುವರ್ಣ ತ್ರಿಭುಜ’ ಮುಳುಗಿದ್ದು ಹೇಗೆ?

ಶನಿವಾರ, ಮೇ 25, 2019
22 °C
ಏಳು ಮೀನುಗಾರರ ಕುಟುಂಬದವರಿಗೆ ವದಂತಿಗಳ ನಡುವೆ ಮಾನಸಿಕ ತೊಳಲಾಟ

‘ಸುವರ್ಣ ತ್ರಿಭುಜ’ ಮುಳುಗಿದ್ದು ಹೇಗೆ?

Published:
Updated:
Prajavani

ಕಾರವಾರ: ಐದು ತಿಂಗಳ ಮಾನಸಿಕ ತೊಳಲಾಟ ಒಂದೆಡೆ, ವದಂತಿಗಳಿಂದ ಒತ್ತಡಕ್ಕೆ ಒಳಗಾಗಿ ಸಂಕಟ ಪಡಬೇಕಾದ ಸ್ಥಿತಿ ಮತ್ತೊಂದೆಡೆ. ಹಲವು ವರ್ಷಗಳಿಂದ ಸಮುದ್ರದಲ್ಲಿ ಸುತ್ತಾಡಿಸಿದ್ದ ದೋಣಿ ಮುಳುಗಿದ್ದು ಹೇಗೆ, ಅದರಲ್ಲಿದ್ದವರು ಏನಾದರು ಎಂಬ ಪ್ರಶ್ನೆ ಇನ್ನೊಂದೆಡೆ. ಇವುಗಳ ಮಧ್ಯೆ ಸಿಲುಕಿರುವ ಕುಟುಂಬ ಸದಸ್ಯರ ಹಣೆಯಲ್ಲಿ ಮುಂದೇನು ಮಾಡಬೇಕು ಎಂಬ ಚಿಂತೆಯ ಗೆರೆ. 

ಡಿ.15ರಂದು ಮಲ್ಪೆಯಿಂದ ಮೀನುಗಾರಿಕೆಗೆ ಹೊರಟು ನಾಪತ್ತೆಯಾದ ‘ಸುವರ್ಣ ತ್ರಿಭುಜ’ ದೋಣಿಯಲ್ಲಿದ್ದ ಏಳು ಮೀನುಗಾರರ ಮನೆಯವರ ಸದ್ಯದ ಸ್ಥಿತಿಯಿದು.

ದೋಣಿ ಮುಳುಗಿದ ಸುದ್ದಿಯನ್ನು ಸಂಪೂರ್ಣವಾಗಿ ನಂಬಲೂ ಅವರಿಗಾಗುತ್ತಿಲ್ಲ. ದೋಣಿಯ ಅವಶೇಷಗಳು ಆಳ ಸಮುದ್ರದಲ್ಲಿ ಇವೆ ಎಂದು ನೌಕಾಪಡೆ ದೃಢಪಡಿಸಿದೆ. ಆದರೆ, ಅದರಲ್ಲಿದ್ದ ಏಳು ಮಂದಿ ಏನಾದರು ಎಂಬುದು ಯಾರಿಗೂ ಗೊತ್ತಿಲ್ಲ. 

ಹತ್ತಾರು ವದಂತಿಗಳು

‘ಸುವರ್ಣ ತ್ರಿಭುಜ’ ದೋಣಿಯಲ್ಲಿ ಇದ್ದವರೊಂದಿಗೆ ಇತರ ಮೀನುಗಾರರು ಡಿ.15ರ ರಾತ್ರಿ ಒಂದು ಗಂಟೆಯ ನಂತರ ಸಂಪರ್ಕ ಕಳೆದುಕೊಂಡರು. ಒಂದೆರಡು ದಿನಗಳ ಬಳಿಕ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡಿದವು. 

ನೌಕಾಪಡೆಯ ಹಡಗು ಡಿಕ್ಕಿ ಹೊಡೆದ ಕಾರಣ ದೋಣಿ ಮುಳುಗಿದೆಯಂತೆ ಎಂದು ವಾಟ್ಸ್‌ಆ್ಯಪ್‌ಗಳಲ್ಲಿ ಸಂದೇಶಗಳು ಬಂದವು. ಇದೇ ರೀತಿಯ ಆರೋಪವನ್ನು ಉಡುಪಿಯ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಮಾಡಿದ್ದಾರೆ. ಅಲ್ಲಿನ ಶಾಸಕ ರಘುಪತಿ ಭಟ್ ಕೂಡ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ದೋಣಿಯಲ್ಲಿದ್ದವು ಎನ್ನಲಾದ ಟಬ್‌ಗಳು ಬಹಳ ದಿನಗಳ ಹಿಂದೆಯೇ ಮಹಾರಾಷ್ಟ್ರದ ಮಾಲ್ವಾನ್ ಬಂದರಿನ ಬಳಿ ಸಿಕ್ಕಿದ್ದವು. ಅದಾದ ಕೆಲವು ದಿನಗಳ ಬಳಿಕ ದೋಣಿಯು ದೇಶದ ಗಡಿದಾಟಿ ಹೋಗಿರಬಹುದು, ಕಡಲುಗಳ್ಳರ ವಶವಾಗಿರಬಹುದು, ಮೀನುಗಾರರನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರಬಹುದು ಎಂಬ ಊಹಾಪೋಹದ ಮಾತುಗಳು ಕೇಳಿಬಂದವು. ಈ ನಡುವೆ ದೋಣಿಯಲ್ಲಿದ್ದ ಒಬ್ಬರ ಮೊಬೈಲ್ ರಿಂಗ್ ಆಯಿತಂತೆ. ಆದರೆ, ಯಾರೂ ಕರೆ ಸ್ವೀಕರಿಸಿಲ್ಲವಂತೆ ಎಂಬ ವದಂತಿಯೂ ಹರಡಿತ್ತು.

ಇವ್ಯಾವುದಕ್ಕೂ ಸ್ಪಷ್ಟನೆ ಯಾರಿಂದಲೂ ಸಿಗಲಿಲ್ಲ. ಇದರಿಂದ ಮೀನುಗಾರರ ಕುಟುಂಬಗಳು ಮತ್ತಷ್ಟು ಕಂಗೆಟ್ಟವು. ಎದುರು ಸಿಕ್ಕಿದ ಮುಖಂಡರಿಗೆಲ್ಲ ತಮ್ಮ ಕುಟುಂಬ ಸದಸ್ಯರನ್ನು ಹುಡುಕಿಕೊಡುವಂತೆ ಅಂಗಲಾಚಿದರು. ದೈವ, ದೇವರಿಗೆ ಹರಕೆ ಹೊತ್ತರು.

ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಶಾಸಕ ದಿನಕರ ಶೆಟ್ಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮೀನುಗಾರರ ಮನೆಗಳಿಗೆ ಭೇಟಿ ನೀಡಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮೀನುಗಾರರು ಉಡುಪಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದರು. 

‘ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ಸೇರಿದಂತೆ ವಿವಿಧ ಉಪಗ್ರಹ ಸಂಸ್ಥೆಗಳಿಂದ ಪತ್ತೆ ಕಾರ್ಯ ನಡೆಯುತ್ತಿದೆ. ಹಡಗುಗಳು, ಹೆಲಿಕಾಪ್ಟರ್‌ಗಳನ್ನು ಶೋಧಕ್ಕೆ ಬಳಸಿಕೊಳ್ಳಲಾಗಿದೆ. ಕರಾವಳಿ ಕಾವಲು ಪಡೆ, ನೌಕಾಸೇನೆ, ಪೊಲೀಸ್, ಕರಾವಳಿ ಕಾವಲು ಪೊಲೀಸ್ ಸೇರಿದಂತೆ ಎಲ್ಲ ಭದ್ರತಾ ಪಡೆಗಳು ಮೀನುಗಾರರ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿವೆ’ ಎಂದೂ ತಿಳಿಸಲಾಗಿತ್ತು. ಇಷ್ಟೆಲ್ಲ ಆದರೂ ದೋಣಿಯಲ್ಲಿದ್ದವನ್ನು ಹುಡುಕಲು ಯಾಕೆ ಸಾಧ್ಯವಾಗಲಿಲ್ಲ ಎಂಬುದು ಮೀನುಗಾರರ ಪ್ರಶ್ನೆಯಾಗಿದೆ.

ಜಿಲ್ಲೆಯಲ್ಲಿ ದೊಡ್ಡಮಟ್ಟದ ಚರ್ಚೆ

ದೋಣಿಯಲ್ಲಿದ್ದ ಏಳು ಮೀನುಗಾರರ ಪೈಕಿ ಉತ್ತರ ಕನ್ನಡ ಜಿಲ್ಲೆಯವರೇ ಐವರಿದ್ದರು. ಹಾಗಾಗಿ ಈ ಜಿಲ್ಲೆಯಲ್ಲಿ ‘ಸುವರ್ಣ ತ್ರಿಭುಜ’ ದೋಣಿಯ ಬಗ್ಗೆ ಏನೇ ಸುದ್ದಿ ಬಂದರೂ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ದೋಣಿಯನ್ನು ಪತ್ತೆ ಹಚ್ಚಿದ ರೀತಿಯಲ್ಲೇ ಅದರಲ್ಲಿದ್ದ ಮೀನುಗಾರರ ಬಗ್ಗೆಯೂ ಸುಳಿವು ಸಿಗಬೇಕು ಎಂಬುದು ಮೀನುಗಾರರ ಆಗ್ರಹವಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !