ಶನಿವಾರ, ಸೆಪ್ಟೆಂಬರ್ 18, 2021
21 °C
ಬತ್ತಿರುವ ಕೆರೆಯ ಹೂಳೆತ್ತಲು ಆಗ್ರಹ

ಮುಂಡಗೋಡ: ನೀರಿಗಾಗಿ ಪರಿತಪಿಸುವ ವನ್ಯಪ್ರಾಣಿಗಳು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಅದು ಗಡಿಭಾಗದ ಕೆರೆ. ಅಲ್ಲಿ ನೂರಾರು ವನ್ಯಜೀವಿಗಳು ನೀರಿನ ದಾಹ ಇಂಗಿಸಿಕೊಳ್ಳುತ್ತವೆ. ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ಸಹ ಪ್ರಾಣಿಗಳನ್ನು ಕಂಡು ಸಂತಸ ಪಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಕೆರೆ ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ, ನೀರಿಗಾಗಿ ಬಾಯ್ದೆರೆದು ಬಿರುಕು ಬಿಟ್ಟಿರುತ್ತದೆ. ಪ್ರಾಣಿ, ಪಕ್ಷಿಗಳು ಮಾತ್ರ ನೀರಿಗಾಗಿ ಪರಿತಪಿಸುತ್ತವೆ.

ಮುಂಡಗೋಡ–ಶಿಗ್ಗಾಂವಿ ಗಡಿಭಾಗದ ಹುಬ್ಬಳ್ಳಿ ರಸ್ತೆಯಲ್ಲಿರುವ ವಡಗಟ್ಟಾ ಕೆರೆ, ವನ್ಯಜೀವಿಗಳ ಬಾಯಾರಿಕೆ ಇಂಗಿಸುವ ಜಲಮೂಲವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಬರುವ ಈ ಕೆರೆಯ ಹೂಳೆತ್ತುವ ಕೆಲಸ ಆಗದಿರುವುದರಿಂದ, ಪ್ರಾಣಿ, ಪಕ್ಷಿಗಳು ಹನಿನೀರಿಗೂ ಬತ್ತಿರುವ ನೆಲ ನೆಕ್ಕುತ್ತವೆ.

ಅರಣ್ಯ ಕಾಯ್ದೆ ಅಡ್ಡಿ: ಎರಡು ತಾಲ್ಲೂಕುಗಳ ಗಡಿಭಾಗದಲ್ಲಿ ಇರುವ ಕೆರೆ ಕಾಮಗಾರಿ ಮಾಡಿಸಲು ಅರಣ್ಯ ಕಾಯ್ದೆ ಅಡ್ಡಿಯಾಗಿದೆ. ಕೆರೆಯ ಒಂದು ಭಾಗ ಮುಂಡಗೋಡ ತಾಲ್ಲೂಕಿಗೆ ಸೇರಿದರೆ, ಉಳಿದ ಭಾಗ ಶಿಗ್ಗಾಂವಿ ತಾಲ್ಲೂಕಿನ ದುಂಢಶಿ ಉಪವಲಯದಲ್ಲಿದೆ. ಎರಡೂ ತಾಲ್ಲೂಕುಗಳ ಅರಣ್ಯ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಕೆರೆ ಬಡವಾಗುತ್ತಿದೆ.

‘ದಟ್ಟ ಕಾನನದ ಮಧ್ಯೆ ಇರುವ ಕೆರೆಯ ಹೂಳೆತ್ತುವ ಕೆಲಸ ಮಾಡಿದರೆ, ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದ ಬೇಸಿಗೆಯಲ್ಲಿಯೂ ವನ್ಯಜೀವಿಗಳಿಗೆ ಅನುಕೂಲವಾಗುತ್ತದೆ. ಅರಣ್ಯ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಮಳೆಗಾಲದಲ್ಲಿ ಹರಿದುಬರುತ್ತದೆ. ಕೆರೆಯು ಆಳವಿಲ್ಲದಿರುವುದರಿಂದ, ಕೆರೆಯ ಮೇಲ್ಭಾಗದಲ್ಲಿ ಮಾತ್ರ ನೀರು ಸಂಗ್ರಹಗೊಂಡು ವರ್ಷದ ಆರಂಭದ ತಿಂಗಳಲ್ಲಿಯೇ ಬರಿದಾಗುತ್ತದೆ’ ಎಂದು ವಡಗಟ್ಟಾದ ಕೆ.ರಾಜು ಅಭಿಪ್ರಾಯಪಡುತ್ತಾರೆ.

‘ಕೆಲವೊಮ್ಮೆ ಸಾರ್ವಜನಿಕರೇ ಬತ್ತಿರುವ ಕೆರೆಗೆ ಟ್ಯಾಂಕರ್‌ ಮೂಲಕ ನೀರು ಹಾಕಿಸಿ ಪ್ರಾಣಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಅವಕಾಶ ನೀಡಿದರೆ ರೈತರೇ ಹೂಳೆತ್ತಿ ಮಣ್ಣು ತೆಗೆದುಕೊಂಡು ಹೋಗುತ್ತಾರೆ’ ಎಂದು ರೈತ ಸೋಮಣ್ಣ ಹೇಳಿದರು.

ಹೂಳೆತ್ತಲು ಸೂಚನೆ: ‘ಸರ್ವೇ ನಂಬರ್ 39ರಲ್ಲಿ ಇರುವ ಕೆರೆ ಹೂಳೆತ್ತುವ ಬಗ್ಗೆ ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಲಾಗುವುದು. ಕಾಡುಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುವುದು ಪುಣ್ಯದ ಕೆಲಸ. ಸರ್ಕಾರದ ವಿವಿಧ ಅನುದಾನದಡಿ ಕಾಮಗಾರಿ ಮಾಡಬಹುದು. ಸ್ಟೇಟಸ್ ಆಫ್ ಲ್ಯಾಂಡ್ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿಗ್ಗಾಂವಿ ಎಸಿಎಫ್ ಬಿ.ಪಿ.ಡುಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು