ಸೋಮವಾರ, ಮೇ 23, 2022
30 °C

ಅನಧಿಕೃತ ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಮಹಿಳೆಯರು  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ನೂರಾರು ಮಹಿಳೆಯರು ಸೋಮವಾರ ಸಿಡಿದೆದ್ದರು. ಅಕ್ರಮವಾಗಿ ದಂಧೆ ಮಾಡುತ್ತಿದ್ದವರ ಮನೆಗಳಿಗೆ ನುಗ್ಗಿ, ಮಾರಾಟಕ್ಕೆ ತರಲಾಗಿದ್ದ ನೂರಾರು ಮದ್ಯದ ಪೊಟ್ಟಣಗಳನ್ನು (ಪೌಚ್) ಪತ್ತೆ ಹಚ್ಚಿದರು.

ಗ್ರಾಮದ ಕೆಲವು ಮನೆಗಳು, ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯ ಮಹಿಳೆಯರ ನೋವಾಗಿದೆ. 

ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾಗಿರುವ ಮಹಿಳೆಯರು, ಕೆಲವು ದಿನಗಳ ಹಿಂದೆ ಅನಧಿಕೃತ ಮದ್ಯ ಮಾರಾಟ ತಡೆಯುವಂತೆ ಯಲ್ಲಾಪುರ ಪೊಲೀಸ್ ಠಾಣೆಗೆ ಲಿಖಿತವಾಗಿ ಮನವಿ ನೀಡಿದ್ದರು. ಆದರೆ, ಯಾವುದೇ ಕ್ರಮ ಜರುಗದ ಕಾರಣ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದಾಗಿ ಅಸ್ವಸ್ಥನಾಗಿದ್ದು, ಹುಬ್ಬಳ್ಳಿಯ 'ಕಿಮ್ಸ್'ನಲ್ಲಿ ಸಾವು—ಬದುಕಿನ ಮಧ್ಯ ಹೋರಾಟ ನಡೆಸಿದ್ದಾನೆ. ಭತ್ತದ ಗದ್ದೆ ಕೊಯ್ಲು ಭತ್ತವನ್ನು ಒಕ್ಕಲು ಮಾಡುವ ಹಂಗಾಮು ಸಂದರ್ಭದಲ್ಲಿ ಗ್ರಾಮದ ಹೆಚ್ಚಿನ ಪುರುಷರು ಅನಧಿಕೃತ ಮದ್ಯ ಮಾರಾಟದ ಅಡ್ಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆ ಮತ್ತು ಅಲ್ಲಲ್ಲಿ ಬಿದ್ದುಕೊಳ್ಳುತ್ತಿರುವ ಕಾರಣದಿಂದ ಮಹಿಳೆಯರೇ ರೈತಾಪಿ ಕೆಲಸ ಮಾಡಬೇಕಾಗಿದೆ. 

ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿ.ವೈ.ಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾದ ನಕಲಿ ದೂಳು ಕೊಕರೆ, ನಾಗಿ ಲಕ್ಕು ಕೊಕರೆ, ಶೋಭಾ ದೋಂಡು ಕೊಕರೆ, ಸಾವಿತ್ರಿ ಮಾಕು ಕೊಕರೆ, ನಕಲಿ ನಾವು ಪಟಕಾರೆ, ಸವಿತಾ ಜಾನು ಖರಾತ್, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು