ಶನಿವಾರ, ಜುಲೈ 31, 2021
27 °C

ಕೋವಿಡ್‌ಗೆ ಮಹಿಳೆ ಸಾವು: ಪೊಲೀಸ್ ಭದ್ರತೆಯಲ್ಲಿ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಕೋವಿಡ್ 19 ಪೀಡಿತೆ, 71 ವರ್ಷದ ಮಹಿಳೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಮೂರನೇ ಸಾವಾಗಿದೆ. 

ಕಾರವಾರದ ಗೊಟೆಗಾಳಿ ಗ್ರಾಮದ ಮಹಿಳೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಾರವಾರಕ್ಕೆ ವಾಪಸಾಗಿದ್ದರು. ನಂತರ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಂಗಳೂರಿಗೆ ಹೋಗಿ ಬಂದ ವಿಚಾರ ಮತ್ತು ಅನಾರೋಗ್ಯದ ಸಂಗತಿಯನ್ನು ಅವರ ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ತೀವ್ರ ನಿಗಾ ಘಟಕಕ್ಕೆ ದಾಖಲಿಸಿದಾಗ ಜ್ವರ ಕಂಡುಬಂದ ಕಾರಣ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಆಗ ಕೋವಿಡ್ 19 ದೃಢಪಟ್ಟಿತ್ತು. ಬಳಿಕ ಅವರನ್ನು 'ಕ್ರಿಮ್ಸ್'ನ ಕೋವಿಡ್ ವಾರ್ಡ್ ಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಬಿಗಡಾಯಿಸಿದ ಕಾರಣ ಗುರುವಾರದಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. 

ಅಂತ್ಯಸಂಸ್ಕಾರಕ್ಕೆ ವಿರೋಧ: ಮಹಿಳೆಯ ಮೃತದೇಹವನ್ನು ನಗರದ ಹೈ ಚರ್ಚ್ ಬಳಿಯ ಸ್ಮಶಾನಕ್ಕೆ ತೆಗೆದುಕೊಂಡು ಬಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳು ಮನವೊಲಿಕೆಗೆ ಯತ್ನಿಸಿದರೂ ಕೇಳಲಿಲ್ಲ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು. ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು