ಶನಿವಾರ, ಆಗಸ್ಟ್ 13, 2022
24 °C
ಮಳೆಗಾಲದ ಅಂತಿಮ ಹಂತದಲ್ಲೂ ಕೃಷಿಕರಿಗೆ ಹೆಚ್ಚಿನ ಆತಂಕ

ಸಿದ್ದಾಪುರ: ಮಲೆನಾಡಿನ ಅಡಿಕೆಗೆ ಕೊಳೆ ರೋಗ

ರವೀಂದ್ರ ಭಟ್‌ ಬಳಗುಳಿ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಮಳೆಗಾಲ ಮುಕ್ತಾಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಡಿಕೆಗೆ ಕೊಳೆ ರೋಗ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ. ತಾಲ್ಲೂಕಿನ ಎಲ್ಲ ಕಡೆ ತೀವ್ರವಾಗಿ ಅಲ್ಲದಿದ್ದರೂ ಬಹಳಷ್ಟು ಅಡಿಕೆ ತೋಟಗಳಲ್ಲಿ ಒಂದೆರಡು ಮರಗಳಿಗಾದರೂ ಕೊಳೆ ರೋಗ ತಗುಲಿದೆ.

ಕೆಲವು ಕಡೆ ಹೆಚ್ಚಿನ ಪ್ರಮಾಣದಲ್ಲಿಯೂ ಈ ರೋಗ ಕಾಣಿಸಿಕೊಂಡಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸ್ವಾಭಾವಿಕವಾಗಿಯೇ ಕೊಳೆ ರೋಗದ ಪ್ರಮಾಣ ಜಾಸ್ತಿ ಇದೆ. ತಾಲ್ಲೂಕಿನ ಹೆಗ್ಗರಣಿ, ನಿಲ್ಕುಂದ, ಮನಮನೆ ಗ್ರಾಮ ಪಂಚಾಯ್ತಿ ಸೇರಿದಂತೆ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಕೊಳೆ ರೋಗದ ಪ್ರಮಾಣ ಜಾಸ್ತಿ ಇದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಆಗಸ್ಟ್‌ ಮೊದಲ ಹಾಗೂ ಎರಡನೇ ವಾರದಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಬೋರ್ಡೋ ಮಿಶ್ರಣ ಸಿಂಪಡಣೆಗೆ ಅವಕಾಶ ಸಿಗಲಿಲ್ಲ. ಅದರೊಂದಿಗೆ ಬೋರ್ಡೊ ಸಿಂಪಡಣೆ ಮಾಡುವ ಕೆಲಸಗಾರರ ಅಲಭ್ಯತೆಯಿಂದಲೂ ಸಕಾಲದಲ್ಲಿ ಮದ್ದು ಹೊಡೆಸಲು ಕೆಲವರಿಗೆ ಆಗಲಿಲ್ಲ. ಇದು ಕೊಳೆ ರೋಗ ಕಾಣಿಸಿಕೊಳ್ಳಲು ಕಾರಣವಾಯಿತುʼ ಎಂಬುದು ರೈತರ ಅಭಿಪ್ರಾಯ. ಈವರೆಗೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 16 ರಷ್ಟು ಜಾಸ್ತಿ ಮಳೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ತಾಲ್ಲೂಕಿನಲ್ಲಿ 4,890 ಹೆಕ್ಟೇರ್‌ ಅಡಿಕೆ ತೋಟವಿದ್ದು, ತಾಲ್ಲೂಕಿನ ಜನರ ಪ್ರಮುಖ ಜೀವನಾಧಾರ ಬೆಳೆಯಾಗಿದೆ. ಅಡಿಕೆ ಬೆಳೆಯ ರಕ್ಷಣೆ ಮಾತ್ರ ಪ್ರತಿವರ್ಷ ಮಳೆಗಾಲದಲ್ಲಿ ರೈತರಿಗೆ ಸವಾಲಿನ ಕಾರ್ಯವಾಗುತ್ತಿದೆ. ಮೊದಲಿನಿಂದಲೂ ಇರುವ ಅಡಿಕೆಯ ಕೊಳೆ ರೋಗ ಮತ್ತು ಒಂದೆರಡು ದಶಕಗಳಿಂದ ಆರಂಭಗೊಂಡಿರುವ ಮಂಗಗಳ ಕಾಟ ಅಡಿಕೆ ಬೆಳೆಗಾರರನ್ನು ಸಾಕಷ್ಟು ಚಿಂತೆಗೀಡು ಮಾಡುತ್ತಿವೆ.

‘ಮಿಶ್ರಣ ಸಿಂಪಡಣೆ ಸೂಕ್ತ’: ‘ಈಗ ಮಳೆ ಕಡಿಮೆಯಾಗಿದ್ದು, ಕೊಳೆ ರೋಗ ಕಾಣಿಸಿಕೊಂಡ ಅಡಿಕೆ ತೋಟದಲ್ಲಿ ಮದ್ದು ಹೊಡೆಯಲು ಅವಕಾಶವಿದೆ. ಆದ್ದರಿಂದ ಮುಂಜಾಗ್ರತೆಯ ದೃಷ್ಟಿಯಿಂದ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವುದು ಉತ್ತಮ. ಇದರಿಂದ ಕೊಳೆ ರೋಗದ ನಿಯಂತ್ರಣ ಆಗುವುದರೊಂದಿಗೆ, ಈಗ ಕೊಳೆ ರೋಗ ತಗುಲಿರುವ ಅಡಿಕೆ ಮರಕ್ಕೆ ಬರುವ ವರ್ಷ ರೋಗ ತಗುಲದಂತೆ ತಡೆಯಲೂ ಕೂಡ ಸಹಕಾರಿಯಾಗುತ್ತದೆ’ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾಬಲೇಶ್ವರ.ಬಿ.ಎಸ್.‌ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು