ಬುಧವಾರ, ಆಗಸ್ಟ್ 17, 2022
29 °C
ಯಲ್ಲಾಪುರ ತಹಶೀಲ್ದಾರ್ ಕ್ರಮಕ್ಕೆ ಅರಣ್ಯ ಇಲಾಖೆ ಆಕ್ಷೇಪ

8,900 ಎಕರೆ ಖಾತೆ ಬದಲಿಸಲು ಸಿದ್ಧತೆ: ಯಲ್ಲಾಪುರ ತಹಶೀಲ್ದಾರ್ ಕ್ರಮಕ್ಕೆ ಆಕ್ಷೇಪ

ಸದಾಶಿವ ಎಂ.ಎಸ್‌. Updated:

ಅಕ್ಷರ ಗಾತ್ರ : | |

ಕಾರವಾರ: ರಾಜ್ಯ ಸರ್ಕಾರವು 1969ರಲ್ಲಿ ಮಾಡಿದ ಆದೇಶವೊಂದರ ಆಧಾರದಲ್ಲಿ ಅರಣ್ಯ ಇಲಾಖೆಯ 8,900 ಎಕರೆ ಜಮೀನಿನ ಖಾತೆ ಬದಲಿಸಿ, ಕಂದಾಯ ಇಲಾಖೆಗೆ ದಾಖಲಿಸಿಕೊಳ್ಳಲು ಯಲ್ಲಾಪುರ ತಹಶೀಲ್ದಾರ್ ಮುಂದಾಗಿದ್ದಾರೆ.

ಇದಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಡಿ. 8ರಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಖಾತೆ ಬದಲಾವಣೆಯಾದ ಜಮೀನಿನ ಬಳಕೆಯ ವಿಧಾನವನ್ನು ನಿರ್ಧರಿಸುವ ಅಧಿಕಾರವು ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರುತ್ತದೆ. ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರ ಕೊಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ತಹಶೀಲ್ದಾರ್ ಕ್ರಮಕ್ಕೆ ಹೆಚ್ಚು ಮಹತ್ವ ಬಂದಿದೆ.

ಜಿಲ್ಲೆಯಲ್ಲಿ ಕಾಫಿ ಬೆಳೆಯಲು 3,013 ಎಕರೆ ಮತ್ತು ಇತರ ಕೃಷಿ ಚಟುವಟಿಕೆಗಳಿಗಾಗಿ 47,708 ಎಕರೆ ಜಮೀನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರವು 1969ರ ಮಾರ್ಚ್ 16ರಂದು ಆದೇಶಿಸಿತ್ತು. ಅದರ ಪ್ರಕಾರ ಯಲ್ಲಾಪುರ ತಾಲ್ಲೂಕಿನಲ್ಲಿ 913 ಎಕರೆಯನ್ನು ಕಾಫಿ ಬೆಳೆಯಲು ಹಾಗೂ 8,102 ಎಕರೆ ಜಮೀನನ್ನು ಕೃಷಿಗೆ ಗುರುತಿಸಲಾಗಿತ್ತು.

ಆಗ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಯಾಗಿರದ ಕಾರಣ ಇಷ್ಟು ಜಮೀನನ್ನು ನಿರ್ವನೀಕರಣ (ಡಿಸ್‌ಫಾರೆಸ್ಟ್) ಮಾಡಲು ರಾಜ್ಯ ಸರ್ಕಾರವೇ ಕ್ರಮ ಕೈಗೊಂಡಿತ್ತು. ಕಂದಾಯ ಇಲಾಖೆಗೆ ಜಮೀನು ಹಸ್ತಾಂತರಿಸುವ ಆದೇಶಕ್ಕೆ ಅರಣ್ಯ ಇಲಾಖೆಯ ಕಾರ್ಯದರ್ಶಿ ಸಹಿ ಮಾಡಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯಲ್ಲಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ‘ಸರ್ಕಾರದ ಆದೇಶಕ್ಕೆ 50 ವರ್ಷಗಳು ಪೂರ್ಣಗೊಂಡರೂ ಖಾತೆ ಬದಲಾವಣೆಯಾಗಿಲ್ಲ. ದಾಖಲೆಗಳಲ್ಲಿ ಇನ್ನೂ ಅರಣ್ಯ ಇಲಾಖೆಯ ಹೆಸರಿದೆ. ಇದರಿಂದ ಸರ್ಕಾರದ ವಿವಿಧ ಯೋಜನೆಗಳಿಗೆ, ಅತಿಕ್ರಮಣಕಾರರಿಗೆ ಜಮೀನು ನೀಡಲಾಗುತ್ತಿಲ್ಲ’ ಎಂದು ವಿವರಿಸಿದರು.

‘ಅಂದು ಸರ್ಕಾರದ ಆದೇಶವಾದ ಬಳಿಕ ದಾಖಲೆಗಳಲ್ಲಿ ಕರ್ನಾಟಕ ಸರ್ಕಾರ (ಕಂದಾಯ ಇಲಾಖೆ) ಎಂದು ಬರೆಯಬೇಕಿತ್ತು. ಹಾಗಿದ್ದರೆ ಮಾತ್ರ ಅದನ್ನು ಸಾರ್ವಜನಿಕರ ಅಗತ್ಯಕ್ಕೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದರ ಪ್ರಕ್ರಿಯೆ ಶುರು ಮಾಡಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ನಿರ್ವನೀಕರಣ ಮಾಡಿ ಕೊಡುವಂತೆ ಈಗಾಗಲೇ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕಂದಾಯ ಭೂಮಿ ಎಂದು ನಮೂದಾದರೂ ಅದರಲ್ಲಿರುವ ಮರಗಳ ತೆರವಿಗೆ ಅಧಿಕಾರವಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಮೀನು ಸ್ವರೂಪದಲ್ಲಿ ಅರಣ್ಯವೇ ಆಗಿದ್ದರೆ ಅದನ್ನು ವಾಪಸ್ ಆ ಇಲಾಖೆಗೆ ಕೊಡಲು ಸಿದ್ಧರಿದ್ದೇವೆ. ಆದರೆ, ಅವರು ನಮಗೆ ನೀಡುವ ದಾಖಲೆಯಲ್ಲಿ ಅದರ ಮಾಹಿತಿ ಇರಬೇಕು’ ಎಂದರು.

ಕೇಂದ್ರದ ಅನುಮತಿ ಬೇಕು

‘1969ರಲ್ಲಿ ಗುರುತಿಸಿದ್ದ ಸಂಪೂರ್ಣ ಜಮೀನನ್ನು ಆಗಿನ ಉದ್ದೇಶಕ್ಕೆ ನಿಗದಿತ ಅವಧಿಯೊಳಗೆ ಬಳಕೆ ಮಾಡಿಲ್ಲ. 50 ವರ್ಷಗಳ ಹಿಂದೆ ನಿರ್ವನೀಕರಣ ಮಾಡಿರುವ ಜಮೀನು, ಈಗ ಪುನಃ ಅರಣ್ಯವಾಗಿದೆ. ಸರ್ವೆ ನಂಬರ್, ಅತಿಕ್ರಮಣವಾಗಿದ್ದನ್ನು ಗುರುತಿಸಲು ಸಾಧ್ಯವಿಲ್ಲ. ಈಗ ಅದನ್ನು ಪುನಃ ಹಸ್ತಾಂತರಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ್ ಪ್ರತಿಕ್ರಿಯಿಸಿದರು.

‘ಮೇಲ್ಮನವಿ ಸಲ್ಲಿಸಬಹುದು’

‘ಖಾತೆ ಬದಲಾವಣೆ ವಿಚಾರವು ತಹಶೀಲ್ದಾರ್ ಹಂತದಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ಅವರು ಕಾನೂನು ಪ್ರಕಾರವೇ ಮಾಡುತ್ತಿರುವ ವಿಶ್ವಾಸವಿದೆ. ಇದರಿಂದ ಬಾಧಿತರು ಇದ್ದರೆ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಆದರೆ, ಈ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ ಹೆಚ್ಚು ಚರ್ಚಿಸಲಾಗದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

***

ಯಲ್ಲಾಪುರ ತಹಶೀಲ್ದಾರರು ಅರಣ್ಯ ಭೂಮಿಯನ್ನು ನಿರ್ವನೀಕರಣ ಮಾಡುವುದು ಸರಿಯಲ್ಲ. ಈ ಬಗ್ಗೆ ಅವರು ನೀಡಿದ್ದ ನೋಟಿಸ್‌ಗೆ ದಾಖಲೆ ಸಹಿತ ಉತ್ತರಿಸಿದ್ದೇವೆ.

-ಅಶೋಕ ಭಟ್, ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ

***

ಇದು 1969ರಲ್ಲಿ ಆಗಿರುವ ಆದೇಶವಾಗಿರುವ ಕಾರಣ 1980ರಲ್ಲಿ ಜಾರಿಯಾದ ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯಿಸುವುದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರವೇ ಸ್ಪಷ್ಟಪಡಿಸಿದೆ.

-ಗಣಪತಿ ಶಾಸ್ತ್ರಿ, ಯಲ್ಲಾಪುರ ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು