ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ನಿಂದ ಕ್ಷೇಮವಾಗಿ ಮರಳಿದ ಕಾರವಾರದ ಯುವಕ

Last Updated 24 ಆಗಸ್ಟ್ 2021, 11:29 IST
ಅಕ್ಷರ ಗಾತ್ರ

ಕಾರವಾರ: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಚಾಲಕನಾಗಿದ್ದ, ತಾಲ್ಲೂಕಿನ ಸದಾಶಿವಗಡದ ರಾಜೇಶ ಪಡುವಳಕರ್ ಮಂಗಳವಾರ ಸುರಕ್ಷಿತವಾಗಿ ಮರಳಿದ್ದಾರೆ. ಇದರಿಂದ ಅವರು ಮತ್ತು ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಅವರು ಮೂರು ವರ್ಷಗಳಿಂದ ಕಾಬೂಲ್‌ನಲ್ಲಿ ಉದ್ಯೋಗದಲ್ಲಿದ್ದರು. ಅಮೆರಿಕದ ಸೇನೆಗೆ ಆಹಾರ ಪೂರೈಕೆ ಮಾಡುವ ‘ಇಕೊಲಾಗ್’ ಎಂಬ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಅ‍ಫ್ಗಾನಿಸ್ತಾನವನ್ನು ತಾಲೀಬಾನ್‌ ಉಗ್ರರು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಅವರು ಅಮೆರಿಕದ ಸೇನೆಯ ಆಶ್ರಯದಲ್ಲಿದ್ದರು.

ಅವರನ್ನು ಕಾಬೂಲ್‌ನಿಂದ ವಿಮಾನದ ಮೂಲಕ ಕತಾರ್‌ಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಭಾರತೀಯ ವಾಯುಪಡೆಯು ತನ್ನ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಬಂದಿತು. ಬಳಿಕ ಅವರು ಗೋವಾಕ್ಕೆ ಬಂದು ಮಂಗಳವಾರ ಬೆಳಿಗ್ಗೆ ತಾರಿವಾಡದ ತಮ್ಮ ಮನೆಗೆ ತಲುಪಿದರು.

ಅಫ್ಗಾನಿಸ್ತಾನದಲ್ಲಿನ ಸ್ಥಿತಿಯ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಆ.14ರಂದೇ ಅಲ್ಲಿನ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಅಮೆರಿಕದ ಸೇನೆಯವರು ಸೂಚನೆ ನೀಡಿದ್ದರು. ಕಾಬೂಲ್ ಹೊರತಾಗಿ ಮತ್ತೆಲ್ಲ ಪ್ರದೇಶವನ್ನೂ ತಾಲಿಬಾನಿಗಳು ಅದಾಗಲೇ ವಶಪಡಿಸಿಕೊಂಡಿದ್ದರು. ನನ್ನಂತೆ ನೇಪಾಳ, ಶ್ರೀಲಂಕಾ ಹಾಗೂ ಉಗಾಂಡಾ ದೇಶದವರೂ ಕೆಲಸದಲ್ಲಿದ್ದರು. ಸುಮಾರು 20 ಸಾವಿರ ಜನ ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ಅಂತೂ ಇಂತೂ ತಾಯ್ನಾಡಿಗೆ ವಾಪಸ್ ಬಂದಿದ್ದು ಇನ್ನಿಲ್ಲದಂಥ ಸಂತಸ ತಂದಿದೆ’ ಎಂದರು.

‘ವಿಮಾನ ನಿಲ್ದಾಣದ ಹೊರಗೆ ಗುಂಡಿನ ದಾಳಿಯ ಸದ್ದು ಕೇಳಿ ಬರುತ್ತಿತ್ತು. ನಮ್ಮ ಸ್ಥಿತಿ ಏನಾಗಲಿದೆ ಎಂಬ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಒಂದು ಸಲ ಅಲ್ಲಿಂದ ಹೊರಟರೆ ಸಾಕು ಎಂಬಂತಾಗಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT