ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮಕ್ಕಳ ರಕ್ಷಣೆಗೆ ಕ್ರಮ

ಪ್ರತಿ ತಾಲ್ಲೂಕಿನಲ್ಲಿ 25 ಹಾಸಿಗೆಯುಳ್ಳ ಕೋವಿಡ್ ವಾರ್ಡ್ ಆರಂಭಕ್ಕೆ ಪರಿಶೀಲನೆ
Last Updated 11 ಜೂನ್ 2021, 14:26 IST
ಅಕ್ಷರ ಗಾತ್ರ

ಕಾರವಾರ: ‘ಕೋವಿಡ್ ಸೋಂಕಿನ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು, ಮಕ್ಕಳಿಗೆ ರಕ್ಷಣೆ ಹಾಗೂ ಚಿಕಿತ್ಸೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಹೇಳಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುವುದು. ಪ್ರತಿ ತಾಲ್ಲೂಕಿನಲ್ಲೂ 25 ಹಾಸಿಗೆಯುಳ್ಳ ಮಕ್ಕಳ ಕೋವಿಡ್ ವಾರ್ಡ್ ತೆರೆಯಲು ಸ್ಥಳ ಗುರುತಿಸಲಾಗುತ್ತಿದೆ. ಮಕ್ಕಳಿಗೆ ಅಲ್ಲಿ ಅಗತ್ಯವಾದ ಆಟಿಕೆ ಸಾಮಗ್ರಿ, ಶೌಚಾಲಯ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಮಕ್ಕಳ ಆರೋಗ್ಯ ಸದೃಢತೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ, ಆಶಾ, ಕಾರ್ಯಕರ್ತರ ಮೂಲಕ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಆರು ವರ್ಷದೊಳಗಿನ 1.06 ಲಕ್ಷ ಮಕ್ಕಳಿದ್ದಾರೆ. ತೀವ್ರ ಅಪೌಷ್ಟಿಕತೆ ಹೊಂದಿರುವ 184 ಮಕ್ಕಳಿದ್ದಾರೆ. ಅಪೌಷ್ಟಿಕವಾಗಿರುವ ಮಕ್ಕಳ ಸಂಖ್ಯೆ 4,402 ಆಗಿದೆ. ಈ ಎಲ್ಲ ಮಕ್ಕಳಿಗೆ ಉತ್ತಮ ಆಹಾರ ನೀಡುವ ಮೂಲಕ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪ್ರೊಟೀನ್ ಪೌಡರ್, ಚವನ್ ಪ್ರಾಶ್, ಮಲ್ಟಿ ವಿಟಮಿನ್ ಸಿರಪ್, ಜಿಂಕ್ ಮತ್ತು ಐರನ್ ಸಿರಪ್, ಜ್ವರದ ಸಿರಪ್ ಒಳಗೊಂಡ ಒಂದು ಕಿಟ್ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವರಿಗೆ ಮೊದಲು ಅಂಗನವಾಡಿಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆಯ ಪ್ರಮಾಣಕ್ಕಿಂತ ಒಂದೂವರೆ ಪಟ್ಟು ಹೆಚ್ಚು ನೀಡಲಾಗುವುದು. ಮಧ್ಯಮ ಪ್ರಮಾಣದಲ್ಲಿ ಅಪೌಷ್ಟಿಕವಾಗಿರುವ ಮಕ್ಕಳಿಗೆ ಆದ್ಯತೆಗೆ ಅನುಗುಣವಾಗಿ ಕಿಟ್‌ಗಳನ್ನು ಹಂಚಲಾಗುವುದು’ ಎಂದು ಹೇಳಿದರು.

151 ಮಕ್ಕಳಿಗೆ ಸೋಂಕು ದೃಢ

‘ಕೋವಿಡ್ ಕಾರಣದಿಂದಾಗಿ ಜಿಲ್ಲೆಗೆ ಆರು ತಿಂಗಳ ಅವಧಿಯಲ್ಲಿ ಮೂರು ವರ್ಷದೊಳಗಿನ 863 ಮಕ್ಕಳು, 3ರಿಂದ 6 ವರ್ಷದೊಳಗಿನ 1,121 ಮಕ್ಕಳು, 562 ಗರ್ಭಿಣಿಯರು, 639 ಬಾಣಂತಿಯರು ವಲಸೆ ಬಂದಿದ್ದಾರೆ. ಸೋಂಕಿನ ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ 18 ವರ್ಷದೊಳಗಿನ 151 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಆದರೆ, ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಯಾವುದೇ ಸಮಸ್ಯೆ ಉಂಟಾಗಲಿಲ್ಲ’ ಎಂದು ಪ್ರಿಯಾಂಗಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT