ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಖ್ಯಾಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ'

Last Updated 1 ಜುಲೈ 2013, 8:22 IST
ಅಕ್ಷರ ಗಾತ್ರ

ಕಾರವಾರ:  `ದೇಶದ ಅಭಿವೃದ್ಧಿಗಾಗಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಸಂಖ್ಯಾಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ' ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್ ಹೇಳಿದರು.

ಸಂಖ್ಯಾಶಾಸ್ತ್ರಜ್ಞ ಪ್ರೊ. ಪಿ.ಸಿ.ಮಹಾಲಾನೋಬಿಸ್ ಅವರ ಜನ್ಮದಿನದ ಅಂಗವಾಗಿ ಕೆ.ಡಬ್ಲೂಟಿಎಸ್ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರೇ ಸಂಖ್ಯೆಗಳು ಯಾವುದೇ ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ಆಯಾ ಕಾಲಘಟ್ಟಕ್ಕೆ ಅನ್ವಯಿಸಿದರೆ ಸಂಖ್ಯಾಶಾಸ್ತ್ರದ ಮಹತ್ವ ತಿಳಿಯಬಹುದು. ಮಾನವನ ಏಳಿಗೆಗೆ ಸಂಖ್ಯಾಶಾಸ್ತ್ರ ಮಹತ್ವದ ಕೊಡುಗೆ ನೀಡುತ್ತಿದೆ. ಸಂಖ್ಯಾಶಾಸ್ತ್ರದ ಆಧಾರದಲ್ಲೊ ಎಲ್ಲಾ ಯೋಜನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದರು.

ಕೈಗಾರಿಕಾ ಕ್ಷೇತ್ರದಲ್ಲಿನ ಉದ್ಯೋಗದ ಅವಕಾಶಗಳು ಕುರಿತು ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಸಂಪನ್ಮೂಲಗಳು ದೇಶದ ಆರ್ಥಿಕ ಪ್ರಗತಿಯನ್ನು ತೋರಿಸುತ್ತವೆ. ದೇಶದ ಪ್ರಗತಿ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ರಾಜ್ಯದಲ್ಲಿ 4.15 ನೋಂದಾಯಿತ ಕೈಗಾರಿಕಾ ಘಟಕಗಳಿದ್ದು, 24 ಲಕ್ಷ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 10097 ಘಟಕಗಳು ಇದ್ದು ಸುಮಾರು 54ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದರು.

ಕಳೆದ ಕೆಲವು ವರ್ಷಗಳಿಂದ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಉತ್ಪಾದನಾ ಕ್ಷೇತ್ರದಿಂದ ರಾಜ್ಯದ ಜಿಡಿಪಿಗೆ ಬರುವ ಆದಾಯದ ಪ್ರಮಾಣ ಕಡಿಮೆಯಾಗಿದ್ದು, ಸೇವಾ ವಲಯದ ಆದಾಯದ ಪ್ರಮಾಣ ಹೆಚ್ಚಿದೆ. ಕೈಗಾರಿಕಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಕೈಗಾರಿಕೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಅಗತ್ಯವಿದೆ. ವಾಣಿಜ್ಯ ಪದವೀಧರರು ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಸ್ವಯಂ ಉದ್ಯೋಗ ಕೈಗೊಳ್ಳುವ ಮೊದಲು ಮಾರುಕಟ್ಟೆ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎಚ್.ನಾಯ್ಕ  ಮಾತನಾಡಿ, ಪ್ರೊ. ಪಿ.ಸಿ.ಮಹಾಲಾನೋಬಿಸ್ ದೇಶದ ಹಿರಿಯ ಸಂಖ್ಯಾಶಾಸ್ತ್ರಜ್ಞ ಮಾತ್ರವಲ್ಲ ಅರ್ಥಶಾಸ್ತ್ರಜ್ಞ.     ಯೋಜನಾ ಆಯೋಗದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಯೋಜನೆಗಳನ್ನು ರೂಪಿಸುವಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪಿ.ಬಿ.ಹೊಸೂರು ಅವರು ಪ್ರಾಸ್ತಾವಿಕ ಮಾತನಾಡಿದರು.
ಪ್ರೊ. ಪಿ.ಸಿ. ಮಹಾಲಾನೋಬಿಸ್ ಸಾಧನೆಗಳು ಮತ್ತು ಸಾಂಖ್ಯಿಕ ಅವಕಾಶಗಳು ಕುರಿತು ಆಯೋಜಿಸಲಾಗಿದ್ದ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ನಗದು ಬಹುಮಾನ ಹಾಗೂ ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT