ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

72 ಮೊಬೈಲ್ ಟವರ್: ಅಡ್ಡಿಯಾದ ಬೆಟ್ಟ ಭೂಮಿ

ಬಿಎಸ್‍ಎನ್ಎಲ್‍ಗೆ ನೀಡಲಾಗಿದ್ದ ಲೀಸ್‍ ಆದೇಶ ಹಿಂಪಡೆದ ಜಿಲ್ಲಾಧಿಕಾರಿ
Published 25 ಆಗಸ್ಟ್ 2023, 5:35 IST
Last Updated 25 ಆಗಸ್ಟ್ 2023, 5:35 IST
ಅಕ್ಷರ ಗಾತ್ರ

ಕಾರವಾರ: ಗುಡ್ಡಗಾಡು ಜಿಲ್ಲೆಯಲ್ಲಿ ಸಂಪರ್ಕ ಸುಲಭವಾಗಿಸುವ ದೃಷ್ಟಿಯಿಂದ ಬಿಎಸ್ಎನ್ಎಲ್ ನಿರ್ಮಿಸಲು ಮುಂದಾಗಿರುವ ಮೊಬೈಲ್ ಟವರ್‌ಗಳ ಸ್ಥಾಪನೆಗೆ ಜಾಗದ ಸಮಸ್ಯೆ ಎದುರಾಗಿದೆ. 72 ಕಡೆಗಳಲ್ಲಿ ನೀಡಿದ್ದ ಜಾಗದ ಲೀಸ್ ಆದೇಶವನ್ನು ಜಿಲ್ಲಾಧಿಕಾರಿ ಆ.21 ರಂದು ಹಿಂಪಡೆದಿದ್ದಾರೆ.

ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಜಿಲ್ಲೆಗೆ ಕಳೆದ ವರ್ಷ 250ಕ್ಕೂ ಹೆಚ್ಚು ಹೊಸ ಮೊಬೈಲ್ ಟವರ್‌ಗಳನ್ನು ಮಂಜೂರು ಮಾಡಿದೆ. ‘ಮಿಷನ್ 500’ ಯೋಜನೆ ಅಡಿ ನಿರ್ಮಾಣಗೊಳ್ಳಲಿರುವ ಈ ಟವರ್‌ಗಳನ್ನು ಮುಂದಿನ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕಿದೆ. ಆದರೆ ಜಿಲ್ಲೆಯಲ್ಲಿ ಹಲವು ಟವರ್‌ಗಳ ನಿರ್ಮಾಣಕ್ಕೆ ಜಾಗದ ಕೊರತೆಯೆ ದೊಡ್ಡ ಸವಾಲಾಗಿದೆ.

ಮೊಬೈಲ್ ಟವರ್‌ಗಳ ಸ್ಥಾಪನೆಗೆ ಅಗತ್ಯ ಜಾಗ ಗುರುತಿಸಿ ಈಗಾಗಲೆ ಮುಂದಿನ 30 ವರ್ಷಗಳ ಅವಧಿಗೆ ಲೀಸ್‍ಗೆ ನೀಡಿ ಆದೇಶವನ್ನೂ ಹೊರಡಿಸಲಾಗಿದೆ. ಸರ್ಕಾರಿ ಜಾಗದ ಲಭ್ಯತೆ ಇಲ್ಲದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಬೆಟ್ಟ ಭೂಮಿಯನ್ನು ಲೀಸ್ ಆಧಾರದಲ್ಲಿ ಬಿಎಸ್ಎನ್ಎಲ್‍ಗೆ ನೀಡಿ ಜಿಲ್ಲಾಧಿಕಾರಿ ಮೇ ಮತ್ತು ಜೂನ್‍ನಲ್ಲಿ ಆದೇಶಿಸಿದ್ದರು.

ಈ ಆದೇಶಕ್ಕೆ ಆಕ್ಷೇಪಿಸಿದ್ದ ಶಿರಸಿ ಡಿಸಿಎಫ್ ಬೆಟ್ಟ ಭೂಮಿಯನ್ನು ಲೀಸ್ ಆಧಾರದಲ್ಲಿ ನೀಡಲಾಗದು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

‘ಸರ್ಕಾರಿ ಬೆಟ್ಟ ಭೂಮಿಯನ್ನು ಅಧಿಸೂಚಿತ ಅರಣ್ಯ ಪ್ರದೇಶ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಲು ಭಾರತೀಯ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅನ್ವಯ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಬೆಟ್ಟದಲ್ಲಿ ವಿಶೇಷ ಹಕ್ಕು ಹೊಂದಿರುವ ಬೆಟ್ಟ ಬಳಕೆದಾರರಿಗೆ ವಿವಿಧ ಸೌಕರ್ಯಕ್ಕೆ ಅನುಮತಿಸಲು ಮಾತ್ರ ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅವರ ಹೊರತಾಗಿ ಉಳಿದವರಿಗೆ ಜಗ ಬಳಕೆ ನೀಡಲು ಅವಕಾಶವಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಬಿಎಸ್ಎನ್ಎಲ್‍ಗೆ ನೀಡಿದ್ದ ಲೀಸ್ ಆದೇಶ ಹಿಂಪಡೆದಿದ್ದಾರೆ.

ಯಾವೆಲ್ಲ ಲೀಸ್ ಆದೇಶ ಹಿಂಪಡೆತ?

ಶಿರಸಿ ತಾಲ್ಲೂಕಿನ ಬಾಳಗಾರ ಶಿವಳ್ಳಿ ತುಡಗುಣಿ ನೇರ್ಲವಳ್ಳಿ ಮುಂಡಗನಮನೆ ದೇವನಮನೆ ಹೆಬ್ರೆ ಕಲ್ಲಳ್ಳಿ ಕೊಟ್ಟಿಗೆಹಳ್ಳಿ ಸಣ್ಣಳ್ಳಿ ಕೊಪ್ಪಲತೋಟ ಕಕ್ಕಳ್ಳಿ ಧೋರಣಗಿರಿ ಮುಸ್ಕಿ ಶಿರಗುಣಿ ಗುರುವಳ್ಳಿ ಕೊಡ್ನಗದ್ದೆ ಕಲ್ಲಗದ್ದೆ–ಕಂಚಿಗದ್ದೆ ಮಣದೂರು ಜಡ್ಡಿಗದ್ದೆ ಕೋಳಿಗಾರ ಶೀಗೆಹಳ್ಳಿ ಔಡಾಳ ಮುರೇಗಾರ ಬಾಳೆಕಾಯಿಮನೆ ತಟಗುಣಿ ಬಾಳೆಗದ್ದೆ ಸೊಣಗಿನಮನೆ ನೈಗಾರ ಕಡಬಾಳ ಕಾನಮುಸ್ಕಿ ಗೋಣಸರ. ಸಿದ್ದಾಪುರ ತಾಲ್ಲೂಕಿನ ನೈಗಾರ ಹಾಲೇಗೌರಿ ಶೀಗೇಹಳ್ಳಿ ಶಮೆಮನೆ ಕೆಳಗಿನಮನೆ ವಾಜಗೋಡ ಲಕ್ಕಬ್ಬಕೇರಿ ಗಿಜಗಿಣಿ ಸಂಪಗೋಡ ತಲೆಕೇರಿ ಉಂಬಳಮನೆ ಮಣಿಗಾರ ಸುತ್ತಲಮನೆ ಹುಕ್ಕಳ್ಳಿ ಹೇಮಗಾರ ಗವಿನಗುಡ್ಡ ನಂದ್ಯಾನೆ ಉಂಚಳ್ಳಿ ಕಂಸಲೆ ಹಾವಿನಬೀಳು ಯಲುಗಾರ ಕುಡೇಗೋಡ ಬಾಳೆಕೊಪ್ಪ ಹುಕ್ಕಳಿ ಹಳ್ಳಿಬೈಲ. ಯಲ್ಲಾಪುರ ತಾಲ್ಲೂಕಿನ ಬೀಜನಕೊಪ್ಪ ಸೋಮನಹಳ್ಳಿ ಸೂಳಗಾರ ಅಲವಾಡ ಹರಿಗದ್ದೆ ಇಳೇಹಳ್ಳಿ ಚಿಮನಳ್ಳಿ ಕಳಚೆ ಹುಟಕಮನೆ ನಾಗರಖಾನ ಡಬಗುಳಿ ಬೆಣದಗುಳಿ ಕೋಮಡಿ ಬೆಡಸಗದ್ದೆ ಭಟ್ಕಳ ತಾಲ್ಲೂಕಿನ ಕೋಣಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT