ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಕೊರತೆ ನಡುವೆಯೂ ಗುರುತರ ಸಾಧನೆ

ಪದವಿ, ಸ್ನಾತಕೋತ್ತರ ಪದವಿಯಲ್ಲಿ ಗಣನೀಯ ವಿದ್ಯಾರ್ಥಿಗಳು: ಉತ್ತಮ ಸೌಲಭ್ಯ
Published 22 ಮೇ 2024, 5:24 IST
Last Updated 22 ಮೇ 2024, 5:24 IST
ಅಕ್ಷರ ಗಾತ್ರ

ಮುಂಡಗೋಡ: ನಾಲ್ಕು ದಶಕಗಳ ಸಂಭ್ರಮದಲ್ಲಿರುವ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಲವು ಇಲ್ಲಗಳ ಕೊರತೆ ನಡುವೆಯೂ ಗಮನಾರ್ಹ ಸಾಧನೆ ಮಾಡುತ್ತಿದೆ.

ತಾಲ್ಲೂಕಿನ ಮೊದಲ ಹಾಗೂ ಏಕೈಕ ಪದವಿ ಕಾಲೇಜು 23 ವಿದ್ಯಾರ್ಥಿಗಳಿಂದ ಆರಂಭಗೊಂಡು, ಇಂದು 890ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. 1984ರಲ್ಲಿ ಎಪಿಎಂಸಿ ಆವರಣದ ಕಟ್ಟಡದಲ್ಲಿ ಆರಂಭಗೊಂಡಿದ್ದ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂದು ಐದು ಎಕರೆ ವಿಶಾಲವಾದ ಪ್ರದೇಶದಲ್ಲಿ ಸ್ವಂತ ಕಟ್ಟಡ ಹೊಂದಿದೆ. ಆದರೆ, ಇರುವ ಜಾಗದಲ್ಲಿಯೇ ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವುದರಿಂದ, ಪದವಿ ಕಾಲೇಜಿಗೆ ಮುಂದಿನ ದಿನಗಳಲ್ಲಿ ಜಾಗದ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಶಿಕ್ಷಣ ಪ್ರೇಮಿಗಳು ಹೇಳುತ್ತಾರೆ.

ಪಕ್ಕದ ಕಲಘಟಗಿ, ಶಿಗ್ಗಾವಿ, ಶಿರಸಿ ತಾಲ್ಲೂಕಿನ ಗಡಿಭಾಗದ ಪ್ರದೇಶದ ವಿದ್ಯಾರ್ಥಿಗಳೂ ಕಾಲೇಜಿಗೆ ಬರುತ್ತಾರೆ. ಬಿ.ಎ, ಬಿ.ಕಾಂ, ಎಂ.ಕಾಂ ತರಗತಿಗಳನ್ನು ಹೊಂದಿರುವ ಕಾಲೇಜಿನಲ್ಲಿ, ಕಳೆದ ವರ್ಷ ಬಿ.ಸಿ.ಎ ತರಗತಿಗಳನ್ನು ಆರಂಭಿಸಿದ್ದು, ಎರಡು ಕಂಪ್ಯೂಟರ್‌ ಲ್ಯಾಬ್‌ಗಳನ್ನು ಹೊಂದಿದೆ. ಮೊದಲ ಬ್ಯಾಚ್‌ನಲ್ಲಿ 30 ವಿದ್ಯಾರ್ಥಿಗಳಿದ್ದಾರೆ.

‘11 ಕಾಯಂ ಉಪನ್ಯಾಸಕರು ಹಾಗೂ 23 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಈ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜು ಆವರಣದಲ್ಲಿ ವನ್ಯಾಪ್ರಾಣಿಗಳಿಗೆ ನೀರಿನ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಆಯುರ್ವೇದಿಕ್‌ ಸಸ್ಯಗಳನ್ನು ಆವರಣದಲ್ಲಿ ಬೆಳೆಸಲಾಗಿದೆ. ಮಳೆ ನೀರು ಸಂಗ್ರಹ  ವ್ಯವಸ್ಥೆಯಿದೆ’ ಎಂದು ಪ್ರಾಚಾರ್ಯ ಪ್ರಸನ್ನಸಿಂಗ್‌ ಬಿ.ಹಜೇರಿ ಹೇಳಿದರು.

‘ಕಾಲೇಜಿನ ಎಲ್ಲ ತರಗತಿ ಕೊಠಡಿಗಳಿಗೆ ಎಲ್‌ಸಿಡಿ ಪ್ರೊಜೆಕ್ಟರ್‌, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸ್ಫರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲು ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ವಿಷಯ ತಜ್ಞ ಹಾಗೂ ಅಧಿಕಾರಿಗಳಿಂದ ತರಬೇತಿ ನೀಡಲಾಗುತ್ತಿದೆ. ಸುಮಾರು 2,400 ಪುಸ್ತಕಗಳ ಸಂಗ್ರಹ ಹೊಂದಿರುವ ಗ್ರಂಥಾಲಯದ ಸೌಲಭ್ಯವಿದೆ’ ಎಂದರು.

‘ಗ್ರಂಥಾಲಯವು ಶಿಥಿಲಾವಸ್ಥೆಗೆ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಏಳು ಕೊಠಡಿಗಳು ನೆಲಸಮಕ್ಕಾಗಿ ದಿನಗಳನ್ನು ಎದುರಿಸುತ್ತಿವೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಡೆಸ್ಕ್‌ಗಳ ಕೊರತೆ, ಹೊಸ ಕೊಠಡಿಗಳ ಬೇಡಿಕೆ ಪಟ್ಟಿ ಬೆಳೆದಿದೆ. ವಿಜ್ಞಾನ ಪ್ರಯೋಗಾಲಯ, ಬಿಸಿಎ ತರಗತಿಗಳಿಗೆ ಕಾಯಂ ಉಪನ್ಯಾಸಕರು, ಗ್ರಂಥಪಾಲಕರ ನೇಮಕ, ಸುಸಜ್ಜಿತ ಗ್ರಂಥಾಲಯದ ಅವಶ್ಯಕತೆಯಿದೆ. ಆಡಿಟೋರಿಯಂನಲ್ಲಿ ಆಸನಗಳ ಕೊರತೆಯಿದ್ದು, ಪ್ರತಿ ಸಲ ಕಾರ್ಯಕ್ರಮ ನಡೆದಾಗ ಬಾಡಿಗೆ ರೂಪದಲ್ಲಿ ಕುರ್ಚಿಗಳನ್ನು ತರಿಸುವ ಅನಿವಾರ್ಯತೆಯಿದೆ. ಕಾಲೇಜು ಆವರಣದಲ್ಲಿ ಒಂದೇ ಕೊಳವೆ ಬಾವಿ ಇರುವುದರಿಂದ, ವಸತಿ ನಿಲಯಕ್ಕೂ ಅದನ್ನೇ ಬಳಸಲಾಗುತ್ತಿದೆ. ಇದರಿಂದ ನೀರಿನ ಕೊರತೆಯಾಗಿದೆ’ ಎಂದು ಉಪನ್ಯಾಸಕರೊಬ್ಬರು ಹೇಳಿದರು.

‘ತಡಸ ಹಾಗೂ ಮಳಗಿ ಕಡೆಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್‌ ನಿಲ್ದಾಣದಿಂದ ಕಾಲೇಜು ದೂರವಾಗುತ್ತದೆ. ಶಿರಸಿ-ಹುಬ್ಬಳ್ಳಿ ಮಾರ್ಗದ ಬಸ್‌ಗಳನ್ನು ಕಾಲೇಜು ಎದುರಿಗೆ ನಿಲುಗಡೆ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿನಿ ಪೂಜಾ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ಕೊಠಡಿಯಲ್ಲಿ ಪಾಠ ಆಲಿಸುತ್ತಿರುವ ವಿದ್ಯಾರ್ಥಿಗಳು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ಕೊಠಡಿಯಲ್ಲಿ ಪಾಠ ಆಲಿಸುತ್ತಿರುವ ವಿದ್ಯಾರ್ಥಿಗಳು

Highlights - 23 ವಿದ್ಯಾರ್ಥಿಗಳಿಂದ ಆರಂಭ ಇಂದು 890 ವಿದ್ಯಾರ್ಥಿಗಳಿಗೆ ಶಿಕ್ಷಣ ಗ್ರಂಥಾಲಯದಲ್ಲಿ 2,400 ಪುಸ್ತಕಗಳ ಸಂಗ್ರಹ

Cut-off box - ಬಿ.ಎಸ್‍ಸಿ ಕೋರ್ಸ್ ಆರಂಭ ‘ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಬಿ.ಎಸ್‍ಸಿ (ಪಿಸಿಎಂ) ಹೊಸದಾಗಿ ಆರಂಭಿಸಲಾಗುತ್ತಿದೆ. ಮುಂದಿನ ವರ್ಷದಿಂದ ಬಿ.ಎಸ್‍ಸಿ (ಕಂಪ್ಯೂಟರ್‌ ಸೈನ್ಸ್‌) ಬಿ. ಎಸ್‍ಸಿ (ಸಿಬಿಝಡ್)‌ ಹಾಗೂ ಎಂ.ಎ (ಪೊಲಿಟಿಕಲ್‌ ಸೈನ್ಸ್‌) ತರಗತಿಗಳನ್ನು ಆರಂಭಿಸಲು ಇಲಾಖೆಗೆ ಪ್ರಸ್ತಾವನೆ ಕಳಿಸಲಾಗಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಪ್ರಸನ್ನಸಿಂಗ್ ಬಿ.ಹಜೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT