ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ | ಗಿಡ ನೆಟ್ಟು ಪೋಷಿಸುವ ಸಮಾನ ಮನಸ್ಕರ ತಂಡ

Published 23 ಜೂನ್ 2024, 4:39 IST
Last Updated 23 ಜೂನ್ 2024, 4:39 IST
ಅಕ್ಷರ ಗಾತ್ರ

ಮುಂಡಗೋಡ: ವಿವಿಧ ವೃತ್ತಿಯಲ್ಲಿ ಇರುವ ಸಮಾನ ಮನಸ್ಕರ ತಂಡವೊಂದು ಪಟ್ಟಣದಲ್ಲಿ ಗಿಡಗಳನ್ನು ನೆಡುವ ಹಾಗೂ ಪೋಷಿಸುವ ಕಾರ್ಯಕ್ಕೆ ಮುಂದಾಗಿದೆ. ಕೇವಲ ಗಿಡಗಳನ್ನು ನೆಟ್ಟು ಪ್ರಚಾರ ಪಡೆಯುವ ಬದಲು, ನೆಟ್ಟ ಗಿಡಕ್ಕೆ ಸುತ್ತಲೂ ರಕ್ಷಾಕವಚ ನಿರ್ಮಿಸುವುದು ಹಾಗೂ ನೀರಿನ ಕೊರತೆ ಆಗದಂತೆ ಡ್ರಿಪ್‌ ಪೈಪ್‌ಲೈನ್‌ ಅಳವಡಿಸುವ ಯೋಜನೆ ಕೂಡ ಹಾಕಿಕೊಂಡಿದೆ.

ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಈ ತಂಡದಲ್ಲಿ, ಎಂಜಿನಿಯರ್‌, ಉದ್ಯಮಿ, ಗುತ್ತಿಗೆದಾರ, ವ್ಯಾಪಾರಸ್ಥ, ಪ್ರಗತಿಪರ ಕೃಷಿಕ ಹೀಗೆ ವಿವಿಧ ಕೆಲಸದಲ್ಲಿ ಇರುವ ಜನರಿದ್ದಾರೆ. ಪ್ರಚಾರಕ್ಕಿಂತ ಜಾಸ್ತಿ ತಾವು ಬೆಳೆಸಿದ ಗಿಡಗಳು ಮುಂದಿನ ವರ್ಷ ಇನ್ನಷ್ಟು ಎತ್ತರ ಬೆಳೆದಾಗ ನೋಡುವ ಸೌಭಾಗ್ಯ ನಮ್ಮದಾಗಬೇಕು ಎನ್ನುವ ಏಕೈಕ ಉದ್ದೇಶ ಇವರದ್ದಾಗಿದೆ. ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಗಿಡ ನೆಡುವ ಕುರಿತು ಆರಂಭವಾದ ಚರ್ಚೆಗೆ, ಶನಿವಾರ ಚಾಲನೆ ದೊರಕಿದೆ. ಆಯ್ದ ದೇವಸ್ಥಾನಗಳ ಆವರಣದಲ್ಲಿ ಮೊದಲ ಹಂತದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.

‘ನಾಲ್ಕೈದು ವರ್ಷಗಳಿಂದ ರುದ್ರಭೂಮಿ, ಕಾಲೇಜು ಆವರಣ, ಕ್ರೀಡಾಂಗಣದ ಸನಿಹ ಹೀಗೆ ಕೆಲವೆಡೆ ಗಿಡಗಳನ್ನು ನೆಡುತ್ತ ಬಂದಿದ್ದೇವೆ. ಆದರೆ, ಶೇ15ರಷ್ಟು ಗಿಡಗಳು ಮಾತ್ರ ಬೆಳೆದಿವೆ. ಉಳಿದವು ಸೂಕ್ತ ಆರೈಕೆ ಇಲ್ಲದೇ ಮರೆಯಾಗಿವೆ. ಈ ವರ್ಷ ಇದಕ್ಕೊಂದು ಪರಿಹಾರ ಎಂಬಂತೆ, ಕಡಿಮೆ ಗಿಡಗಳನ್ನು ನೆಟ್ಟರೂ ಸಹಿತ, ಅವುಗಳಿಗೆ ರಕ್ಷಾ ಕವಚ ನಿರ್ಮಿಸಬೇಕು. ಒಂದು ವೇಳೆ ನೀರಿನ ಕೊರತೆ ಆದರೆ, 500 ರಿಂದ 1000 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಇಟ್ಟು, ಅದರ ಮೂಲಕ ಪೈಪ್‌ಲೈನ್‌ ಮಾಡಿಸಿ, ಗಿಡಗಳಿಗೆ ನಿರಂತರವಾಗಿ ನೀರುಣಿಸುವ ಕೆಲಸ ಮಾಡಲು ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಮೊದಲನೇ ಹಂತದಲ್ಲಿ 45 ವಿವಿಧ ಜಾತಿಯ ಗಿಡಗಳನ್ನು ನೆಡಲು ಶನಿವಾರದಿಂದ ಚಾಲನೆ ನೀಡಲಾಗಿದೆʼ ಎನ್ನುತ್ತಾರೆ ಯುವಬ್ರಿಗೆಡ್‌ ಮುಖಂಡ ಶ್ರೀಧರ ಉಪ್ಪಾರ.

‘ಸಂಪಿಗೆ, ಬೇವು, ನೇರಳೆ, ಅರಳಿ, ಬಾದಾಮಿ, ಸೀತಾಫಲ, ಹಲಸು ಸೇರಿದಂತೆ ವಿವಿಧ ಹೂ ಹಾಗೂ ಹಣ್ಣಿನ ಗಿಡಗಳನ್ನು ಹಳೂರಿನ ಆಂಜನೇಯ ದೇವಸ್ಥಾನದ ಆವರಣ ಹಾಗೂ ನ್ಯಾಸರ್ಗಿ ರಸ್ತೆಯ ಶರೀಫ ಶಿವಯೋಗಿ ದೇವಸ್ಥಾನದ ಆವರಣದಲ್ಲಿ ನೆಟ್ಟಿದ್ದೇವೆ. ಗಿಡಗಳ ಸುತ್ತಲೂ ಪೋಲ್‌ ಹಾಕಿ ಮೆಶ್‌ ಅಳವಡಿಸಲಾಗಿದೆ. ಸದ್ಯಕ್ಕೆ ನೀರಿನ ಕೊರತೆಯಿಲ್ಲ. ನೀರು ಕಡಿಮೆಯಾದರೆ, ಪರ್ಯಾಯವಾಗಿ ನೀರುಣಿಸಲು ಸಹ ಯೋಜನೆ ಹಾಕಿಕೊಂಡಿದ್ದೇವೆ. ಗಿಡಗಳಿಗೆ ಕೊಟ್ಟಿಗೆ ಗೊಬ್ಬರವನ್ನೂ ಸಹ ಹಾಕಿದ್ದೇವೆ. ಈ ವರ್ಷ ನೆಟ್ಟ ಗಿಡಗಳ ಪೈಕಿ ಶೇ 50ರಷ್ಟಾದರೂ ಬೆಳೆಯುತ್ತವೆ ಎಂಬ ವಿಶ್ವಾಸವಿದೆʼ ಎಂದು ಎಂಜಿನಿಯರ್‌ ರಾಘು ಬಿ.ಎಂ ಹೇಳಿದರು.

ಮಹೇಶ ಹೆಗಡೆ, ಸುರೇಶ ಕಲ್ಲೋಳ್ಳಿ, ಸುನೀಲ ಬೈಲೂರ, ರಾಘವೇಂದ್ರ ನಾಯಕ, ಪವನ ಭಟ್, ಸುನೀಲ ಸಾಲಗಾಂವಿ, ಪರಶುರಾಮ ರಾಣಿಗೇರ, ಮಾರುತಿ ಓಂಕಾರ, ಸುಧೀಂದ್ರ ರಾವ್, ಗುರು ಕಾಮತ, ನಂದೀಶ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT