ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ: ಅಡಿಕೆ ತೋಟದಲ್ಲಿ ನಳನಳಿಸುವ ಡ್ರ್ಯಾಗನ್ ಫ್ರುಟ್

ಮಿಶ್ರ ಬೇಸಾಯದಲ್ಲಿ ಮಾದರಿಯಾದ ಬಾಗಿನಕಟ್ಟಾದ ಸುಬ್ರಹ್ಮಣ್ಯ
ವಿಶ್ವೇಶ್ವರ ಗಾಂವ್ಕರ
Published : 27 ಸೆಪ್ಟೆಂಬರ್ 2024, 4:17 IST
Last Updated : 27 ಸೆಪ್ಟೆಂಬರ್ 2024, 4:17 IST
ಫಾಲೋ ಮಾಡಿ
Comments

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗಿನಕಟ್ಟಾ ಗ್ರಾಮದ ಅಡಿಕೆ ತೋಟದಲ್ಲಿ ಕೇವಲ ಎತ್ತರದ ಅಡಿಕೆ ಮರಗಳಷ್ಟೇ ಕಾಣಸಿಗುವುದಿಲ್ಲ. ಅಲ್ಲಿ ಕಲ್ಲಿನ ಕಂಬಕ್ಕೆ ಹಬ್ಬಿ ನಿಂತ ಡ್ರ್ಯಾಗನ್ ಫ್ರುಟ್‍ಗಳ ಸೊಬಗು ಕಾಣಸಿಗುತ್ತದೆ.

ಗ್ರಾಮದ ಸುಬ್ರಹ್ಮಣ್ಯ ಶಿವರಾಮ ಗಾಂವ್ಕರ ತಮ್ಮ ನಾಲ್ಕು ಎಕರೆ ಅಡಿಕೆ ತೋಟದಲ್ಲಿ ಸಾಂಪ್ರದಾಯಿಕ ಬೆಳೆಗಳಿಗಷ್ಟೆ ಒತ್ತು ನೀಡದೆ ಮಿಶ್ರ ಬೇಸಾಯದ ಮೂಲಕ ಯಶಸ್ಸು ಸಾಧಿಸುತ್ತಿರುವುದನ್ನು ಈ ಸಸಿಗಳು ಸಾರುತ್ತವೆ. ತೋಟದಲ್ಲಿ ಬಾಳೆ, ಕಾಳುಮೆಣಸು, ಏಲಕ್ಕಿ, ಡ್ರ್ಯಾಗನ್ ಫ್ರುಟ್, ಬೆಣ್ಣೆಹಣ್ಣು, ಕಾಫಿ, ವೆನಿಲ್ಲಾ, ಸೇಬು, ದ್ರಾಕ್ಷಿ, ಕಿವಿ, ನೀರುಸೇಬು, ಹೀಗೆ ಬಗೆ ಬಗೆಯ ಬೆಳೆಗಳು ನಳನಳಿಸುತ್ತಿವೆ.

‘ಡ್ರ್ಯಾಗನ್ ಫ್ರುಟ್ ಮಲೆನಾಡು ಭಾಗಕ್ಕೆ ಅಪರಿಚಿತವಾದರೂ ಕಷ್ಟದ ಬೆಳೆ ಅಲ್ಲ. ಐದು ವರ್ಷದ ಹಿಂದೆ ಹಾವೇರಿಯಿಂದ 100 ಡ್ರ್ಯಾಗನ್ ಫ್ರುಟ್ ಸಸಿಗಳನ್ನು ತಂದು ಅಡಿಕೆ ತೋಟದ ಸುತ್ತಲೂ ಪ್ರಾಯೋಗಿಕವಾಗಿ ನೆಟ್ಟಿದ್ದೆ. ಕಳೆದ ವರ್ಷದಿಂದ ಅದು ಉತ್ತಮ ಫಲ ನೀಡುತ್ತಿದೆ. ಸದ್ಯ ತೋಟದಲ್ಲಿ 150ಕ್ಕಿಂತ ಹೆಚ್ಚು ಸಸಿಗಳಿವೆ. ಸರಿಯಾಗಿ ಬೆಳೆದರೆ ಅಡಿಕೆಗಿಂತಲೂ ಹೆಚ್ಚಿನ ಲಾಭ ಪಡೆಯಬಹುದು’ ಎನ್ನುತ್ತಾರೆ ಸುಬ್ರಹ್ಮಣ್ಯ ಗಾಂವ್ಕರ.

‘ಡ್ರ್ಯಾಗನ್ ಫ್ರುಟ್ ಬೆಳೆಯಲು ಹೆಚ್ಚು ನೀರಿನ ಅಗತ್ಯ ಇಲ್ಲ. ವೆಚ್ಚವೂ ಕಡಿಮೆ. ಕಲ್ಲಿನ ಕಂಬ ನೆಟ್ಟು ಅದಕ್ಕೆ ಸಸಿ ಹಬ್ಬಿಸಬೇಕು. ಬೇಸಿಗೆಯ ದಿನಗಳಲ್ಲಿ 15 ದಿನಕ್ಕೊಮ್ಮೆ ನೀರು ಬಿಡಬೇಕು. ಮಳೆಗಾಲದ ದಿನಗಳಲ್ಲಿ ಗಿಡದ ಸುತ್ತ ನೀರು ನಿಲ್ಲದಂತೆ ಮಣ್ಣು ಏರಿಸಬೇಕು. ನೀರು ಇಳಿಯದಂತೆ ಗಿಡದ ಸುತ್ತ ಪ್ಲಾಸ್ಟಿಕ್ ಹಾಸಿದರೆ ಅನುಕೂಲ. ಗಿಡಕ್ಕೆ ಬಸವನ ಹುಳು ಮತ್ತು ಇರುವೆಯ ಕಾಟ ಅಧಿಕವಾಗಿರುವ ಹಿನ್ನೆಲೆಯಲ್ಲಿ ವರ್ಷಕ್ಕೆ 2 ರಿಂದ 3 ಬಾರಿ ತುತ್ತ ಸುಣ್ಣ ಸಿಂಪಡಿಸಬೇಕು’ ಎನ್ನುತ್ತಾರೆ ಅವರು.

‘ಕಳೆದ ವರ್ಷ 160 ಕೆ.ಜಿ. ಡ್ರ್ಯಾಗನ್ ಫ್ರುಟ್ ಬೆಳೆದಿದ್ದೆ. ಪ್ರತಿ ಕೆ.ಜಿಗೆ ತಲಾ ₹240 ದರದಲ್ಲಿ ಮಾರಾಟ ಮಾಡಲಾಗಿದೆ. ಹಣ್ಣಿಗೆ ಉತ್ತಮ ಬೇಡಿಕೆ ಇದೆ. ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಕೊಟ್ಟಿಗೆ ಗೊಬ್ಬರದ ಜೊತೆ ಜೀವಾಮೃತ ಬೆರೆಸಿ ನೀಡುತ್ತೇನೆ’ ಎಂದು ವಿವರಿಸುತ್ತಾರೆ.

ಸುಬ್ರಹ್ಮಣ್ಯ ಗಾಂವ್ಕರ ಅವರ ಹಣ್ಣಿನ ತೋಟ
ಸುಬ್ರಹ್ಮಣ್ಯ ಗಾಂವ್ಕರ ಅವರ ಹಣ್ಣಿನ ತೋಟ
ಸುಬ್ರಹ್ಮಣ್ಯ ಗಾಂವ್ಕರ ಅವರ ತೋಟದಲ್ಲಿ ಫಲಭರಿತ ಹಲಸು
ಸುಬ್ರಹ್ಮಣ್ಯ ಗಾಂವ್ಕರ ಅವರ ತೋಟದಲ್ಲಿ ಫಲಭರಿತ ಹಲಸು
ಅನಿಶ್ಚಿತ ಆದಾಯದ ಕಾರಣಕ್ಕೆ ಯುವಕರು ಕೃಷಿ ತೊರೆಯಬಾರದು. ಮಿಶ್ರಬೆಳೆಯ ಮೂಲಕ ಹೆಚ್ಚಿನ ಆದಾಯ ಭದ್ರತೆ ಕಂಡುಕೊಳ್ಳಬಹುದಾಗಿದೆ
ಸುಬ್ರಹ್ಮಣ್ಯ ಗಾಂವ್ಕರ ಕೃಷಿಕ

ಶ್ರೇಷ್ಠ ಕೃಷಿಕ ಪ್ರಶಸ್ತಿ

ಸುಬ್ರಹ್ಮಣ್ಯ ಗಾಂವ್ಕರ ತಮ್ಮ ಕೃಷಿ ಚಟುವಟಿಕೆಗಳ ಜತೆಗೆ ಶ್ರೀದೇವಿ ರೈತ ಉತ್ಪಾದನಾ ಕಂಪನಿ ಆರಂಭಿಸಿ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಶ್ರಮಿಸುತ್ತಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಈಚೆಗೆ ನಡೆದ ಕೃಷಿಮೇಳದಲ್ಲಿ 2024ನೇ ಸಾಲಿನ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT