ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ: ವಸ್ತು ಸ್ಫೋಟಗೊಂಡು ಕುರಿಗಾಹಿಗೆ ಗಾಯ

Published 9 ಫೆಬ್ರುವರಿ 2024, 15:43 IST
Last Updated 9 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಬಾಚಣಕಿ ಸಮೀಪ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಕೆರೆಯ ಹತ್ತಿರ ಬಿದ್ದಿದ್ದ ಹೊಳಪಿನ ವಸ್ತುವನ್ನು ಕುತೂಹಲದಿಂದ ಮುಟ್ಟಿದಾಗ, ವಸ್ತು ಸ್ಫೋಟಗೊಂಡು ಕುರಿಗಾಹಿಯ ಎರಡು ಬೆರಳುಗಳಿಗೆ ಗಾಯವಾಗಿದೆ. ಮಜ್ಹಿಗೇರಿ ಗ್ರಾಮದ ಭರಮಣ್ಣ ಭೋವಿ(55) ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಗುರುವಾರ ಸಂಜೆ ಎಂದಿನಂತೆ ಕುರಿ ಮೇಯಿಸಲು ಹೋದಾಗ ಹೊಳೆಯುತ್ತಿರುವ ವಸ್ತು ಗೋಚರಿಸಿದೆ. ಅದನ್ನು ಮುಟ್ಟಿ ಅದುಮಿದಾಗ ಸ್ಫೋಟಗೊಂಡಿದೆ. ವನ್ಯಪ್ರಾಣಿಗಳ ಬೇಟೆಗೆ ಇಡಲಾಗಿರುವ ಕಚ್ಚಾ ಬಾಂಬ್‌ ಅಥವಾ ನಾಡ ಬಾಂಬ್‌ ಇರಬಹುದು ಎಂದು ಶಂಕಿಸಲಾಗಿದೆ.

‘ಕುರಿ ಹಾಗೂ ಜಾನುವಾರು ತುಳಿದರೂ ಅಥವಾ ಬಾಯಿಂದ ಕಚ್ಚಿದರೂ ಇದೇ ರೀತಿ ಸ್ಫೋಟವಾಗುತ್ತಿತ್ತು. ಕೆರೆಯ ಹತ್ತಿರ ಇಂತಹ ಕೃತ್ಯ ಎಸಗಿರುವ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಗಾಯಾಳು ಭರಮಣ್ಣ ಆಗ್ರಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಹಾಗೂ ಪಿಎಸ್‌ಐ ಪರುಶುರಾಮ ಗಾಯಾಳುವಿನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಜಲಮೂಲಗಳ ಸಮೀಪ ಪ್ರಾಣಿಗಳ ಬೇಟೆಯಾಡಲು ದುಷ್ಕರ್ಮಿಗಳು ಇಂತಹ ಸ್ಫೋಟಕ ವಸ್ತು ಇಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಹಿಂದೆಯೂ ತಾಲ್ಲೂಕಿನ ಸನವಳ್ಳಿ ಜಲಾಶಯದ ಸಮೀಪ ಸ್ಫೋಟಕ ವಸ್ತು ಕಚ್ಚಿ ಜಾನುವಾರು ಗಾಯಗೊಂಡ ಘಟನೆ ನಡೆದಿತ್ತು. ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಬತ್ತಿರುವ ಸಮಯದಲ್ಲಿ ಊರ ಸಮೀಪದ ಕೆರೆಕಟ್ಟೆಗಳಿಗೆ ವನ್ಯಪ್ರಾಣಿಗಳು ಬರುತ್ತಿವೆ. ಇದನ್ನು ಗಮನಿಸಿ ದುಷ್ಕರ್ಮಿಗಳು ಇಂತಹ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಅರಣ್ಯ ಸಿಬ್ಬಂದಿ ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT