ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ: 15 ವರ್ಷದ ಬಳಿಕ ಸ್ವಂತ ಸೂರು ಕಂಡ ಕಾಲೇಜು

ವಿದ್ಯಾರ್ಥಿಗಳಿಗೆ ಬಸ್, ಸಿಬ್ಬಂದಿಗೆ ಕೆಲಸದೊತ್ತಡದ ಸಮಸ್ಯೆ
Published 19 ಮೇ 2024, 4:49 IST
Last Updated 19 ಮೇ 2024, 4:49 IST
ಅಕ್ಷರ ಗಾತ್ರ

ಭಟ್ಕಳ: ಕಳೆದ 15 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಒಂದು ವರ್ಷದ ಹಿಂದೆ ಸ್ವಂತ ಕಟ್ಟಡ ಭಾಗ್ಯವೇನೋ ಸಿಕ್ಕಿದೆ. ಆದರೆ, ಸಿಬ್ಬಂದಿ ಕೊರತೆ, ಸಭಾಭವನ ಇಲ್ಲದ ಸಮಸ್ಯೆ ಮುಂದುವರಿದಿದೆ.

ಜಾಲಿಯ ದೇವಿನಗರದಲ್ಲಿ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಕಟ್ಟಡದಲ್ಲಿ 8 ತರಗತಿ ಕೊಠಡಿಗಳು, ಪ್ರಯೋಗಾಲಯ, ಕಂಪ್ಯೂಟರ ಲ್ಯಾಬ್, ಬೋಧಕ ಹಾಗೂ ಆಡಳಿತ ಸಿಬ್ಬಂದಿ ಕೊಠಡಿ ನಿರ್ಮಿಸಲಾಗಿದೆ.

ಆದರೆ ವಿದ್ಯಾರ್ಥಿಗಳಿಗೆ ಸಾಮೂಹಿಕ ಬೋಧನೆ ಮಾಡಲು, ಅಗತ್ಯ ತರಬೇತಿ ನೀಡಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾದ ಸಭಾಂಗಣ ನಿರ್ಮಿಸಿಲ್ಲ. ತರಬೇತಿ, ಕಾರ್ಯಕ್ರಮವನ್ನು ನಡೆಸಲು ಕಷ್ಟ ಉಂಟಾಗುತ್ತಿದೆ. ಹೊಸದಾಗಿ ನಿರ್ಮಿಸಿರುವ ಕಾಲೇಜು ಕಟ್ಟಡಕ್ಕೆ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ.

ಪ್ರಸಕ್ತ ಸಾಲಿನಲ್ಲಿ 252 ವಿದ್ಯಾರ್ಥಿಗಳು ಕಾಲೇಜಿನ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎ, ಬಿ.ಕಾಂ ಹಾಗು ಬಿಬಿಎ ತರಗತಿಗಳನ್ನು ನಡೆಸಲಾಗುತ್ತಿದೆ.

‘ಕಾಲೇಜಿನಲ್ಲಿ ಕಾಯಂ ಬೋಧಕ ಸಿಬ್ಬಂದಿ ಕೊರತೆ ಇದ್ದರೂ ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಆದರೆ ಬೋಧಕೇತರ ಸಿಬ್ಬಂದಿ ಕೊರತೆ ಇದ್ದು ನಾಲ್ವರು ಇರಬೇಕಾದ ಜಾಗದಲ್ಲಿ ಒಬ್ಬ ಸಿಬ್ಬಂದಿ ಎಲ್ಲ ಕೆಲಸವನ್ನೂ ನಿಭಾಯಿಸಬೇಕಾಗಿದೆ’ ಎನ್ನುತ್ತಾರೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ನಾಗೇಶ ಶೆಟ್ಟಿ.

‘ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಭಟ್ಕಳ ಬಸ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿರುವ ಕಾಲೇಜಿಗೆ ಬರಲು ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಬೆಳಿಗ್ಗೆ 9.15 ಭಟ್ಕಳ ಬಸ್ ನಿಲ್ದಾಣದಿಂದ ಜಾಲಿ ಪಟ್ಟಣಕ್ಕೆ ಬಸ್ ವ್ಯವಸ್ಥೆ ಇದ್ದು, ಅಲ್ಲಿಂದ ಅರ್ಧ ಕಿ.ಮೀ. ನಡೆದುಕೊಂಡು ಬಂದು ಕಾಲೇಜು ಸೇರಬೇಕಾದ ಸ್ಥಿತಿ ಇದೆ. ಮಧ್ಯಾಹ್ನ 1.30ಕ್ಕೆ ಕಾಲೇಜಿನ ಬಹುತೇಕ ತರಗತಿ ಮುಕ್ತಾಯಗೊಳ್ಳಲಿದ್ದು, 1.45 ಕ್ಕೆ ತೆಂಗಿನಗುಂಡಿಯಿಂದ ದೇವಿನಗರಕ್ಕೆ ಬರುವ ಬಸ್ಸನ್ನು ಏರಿ ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದರು. ಈಗ ಅದರ ಸಮಯನ್ನು 1.15 ಬದಲಾಯಿಸಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜಿನ ಸಮಯಕ್ಕೆ ಅನುಕೂಲವಾಗುವಂತೆ ಬಸ್ ಬೀಡುವಂತೆ ಹಲವು ಬಾರಿ ಡಿಪೊ ವ್ಯವಸ್ಥಾಪಕರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಬಿಸಿಎ, ಬಿಎಸ್‍ಸಿ ವಿಭಾಗ ಆರಂಭಕ್ಕೆ ಸಿದ್ಧತೆ

‘2024-25ನೇ ಸಾಲಿನಲ್ಲಿ ಬಿಸಿಎ ಹಾಗು ಬಿಎಸ್‍ಸಿ ವಿಭಾಗವನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ತಾಲ್ಲೂಕಿನ ವಿದ್ಯಾರ್ಥಿಗಳು ಬಿಸಿಎ ಹಾಗೂ ಬಿಎಸ್‍ಸಿ ಕಲಿಕೆಗಾಗಿ ನೆರೆಯ ಹೊನ್ನಾವರ ಹಾಗೂ ಬೈಂದೂರು ತಾಲ್ಲೂಕಿನ ಸರ್ಕಾರಿ ಕಾಲೇಜಿಗೆ ತೆರಳುವುದು ತಪ್ಪಲಿದೆ’ ಎನ್ನುತ್ತಾರೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ನಾಗೇಶ ಶೆಟ್ಟಿ.

ಸಿಬ್ಬಂದಿ ಕೊರತೆಯ ನಡುವೆಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಸುಸಜ್ಜಿತ ಸೌಲಭ್ಯಗಳು ಕಾಲೇಜಿನಲ್ಲಿವೆ.
-ನಾಗೇಶ ಶೆಟ್ಟಿ, ಪ್ರಭಾರ ಪ್ರಾಚಾರ್ಯ, ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT