ಹೊನ್ನಾವರ: ಸಂಗೀತದ ತವರೂರು ಬಯಲುಸೀಮೆಯ ಕುಂದಗೋಳದಿಂದ ಮಲೆನಾಡ ಸೆರಗಿನಂಚಿನ ಕಡಲ ತಡಿಯಲ್ಲಿರುವ ಹೊನ್ನಾವರಕ್ಕೆ 80ರ ದಶಕದಲ್ಲಿ ಉದ್ಯೋಗವರಿಸಿ ಬಂದ ಅಶೋಕ ಎಂಬ ಕನಸು ಕಣ್ಣಿನ ಹುಡುಗ ತಾಲ್ಲೂಕು ಹಾಗೂ ಸುತ್ತಮುತ್ತ ಸಂಗೀತದ ಕಂಪು ಪಸರಿಸಿ ಮುಂದೆ ಸಂಗೀತದ ಸುಗ್ಗಿಗೆ ಕಾರಣನಾದ ಸಂಗತಿ ಸಂಗೀತಪ್ರಿಯರ ಮನಸ್ಸಿನಲ್ಲಿ ಮರೆಯಲಾಗದ ನೆನಪಾಗಿ ಉಳಿದಿದೆ.

ಅಶೋಕ ಹುಗ್ಗಣ್ಣವರ ಅವರು ಎಳೆವೆಯಿಂದಲೇ ಸಂಗೀತಕ್ಕೆ ಕಿವಿಯಾದರು. ಸೋದರಮಾವ ಪಂಡಿತ ಲಿಂಗರಾಜ ಬುವ ಅವರನ್ನು ಗುರುವಾಗಿ ಸ್ವೀಕರಿಸಿದ ಅವರು ಮುಂದೆ ಪಂಡಿತ ಸಂಗಮೇಶ್ವರ ಗುರವ ಅವರಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರಿಸಿ ಪ್ರಬುದ್ಧ ಗಾಯಕರಾಗಿ ಹೊರಹೊಮ್ಮಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಸಂಗೀತ ವಿಭಾಗದತ್ತ ಮುಖ ಮಾಡಿದ ಅವರು ಸಂಗೀತ ವಿಷಯದಲ್ಲೂ ಅತ್ಯುತ್ತಮ ಶ್ರೇಣಿಯೊಂದಿಗೆ ಎಂ.ಎ. ಪದವಿ ಗಳಿಸಿ ತಂಬೂರದ ತಂತಿಯ ನಿನಾದಲ್ಲೇ ತಮ್ಮ ಭವಿಷ್ಯದ ಹೊಳಹು ಕಂಡು ಅದನ್ನೇ ವೃತ್ತಿಯಾಗಿ ಸ್ವೀಕರಿಸುವ ನಿರ್ಧಾರ ಮಾಡಿದರು. ಹೊನ್ನಾವರ ಎಸ್ಡಿಎಂ ಕಾಲೇಜಿನಲ್ಲಿ ಸಂಗೀತ ಉಪನ್ಯಾಸಕರಾಗಿ ಸೇವೆಗೆ ಸೇರಿದರು. ತಾತ್ಕಾಲಿಕ ಉದ್ಯೋಗದ ಅನಶ್ಚಿತತೆಯ ನಡುವೆಯೂ ತಮ್ಮ ಪ್ರತಿಭಾಪೂರ್ಣ ವಿದ್ವತ್ತನ್ನು ಹಂಚುವ ಮೂಲಕ ಜಿಲ್ಲೆಯ ವಿವಿಧೆಡೆಯಲ್ಲಿ ತಮ್ಮ ಶಿಷ್ಯಗಣವನ್ನು ಸೃಷ್ಟಿಸಿದ ಜೊತೆಗೆ ಶ್ರೋತೃಗಳಿಗೆ ಸಂಗೀತದ ರಸದೌತಣ ನೀಡಿದರು. ಮುಂದೆ ತಮ್ಮ ಉಪನ್ಯಾಸಕ ವೃತ್ತಿಯ ಕಾಯಮಾತಿ ನಂತರವೂ ದಶಕಗಳ ಕಾಲ ಸಂಗೀತ ಸೇವೆ ಮುಂದುವರಿಸಿದರು. ಜನಸಾಮಾನ್ಯರೊಂದಿಗೂ ಉತ್ತಮವಾಗಿ ಬೆರೆಯುವ ಸ್ವಭಾವ ಹೊಂದಿದ್ದ ಅವರು ಪಂಡಿತ ಪಾಮರರಿಗೆಲ್ಲ ಆಪ್ತರಾಗಿದ್ದರು.

ಆಕಾಶವಾಣಿ, ದೂರದರ್ಶನ ಮೊದಲಾದ ಮಾಧ್ಯಮಗಳಲ್ಲಿ ಅತ್ಯುತ್ತಮ ದರ್ಜೆಯ ಸಂಗೀತ ಕಲಾವಿದರಾಗಿ ಗುರುತಿಸಿಕೊಂಡ ಅಶೋಕ ಹುಗ್ಗಣ್ಣವರ್ ಸಂಗೀತ ವಿಷಯದಲ್ಲಿ ಪಿಎಚ್.ಡಿ. ಪದವಿ ಕೂಡ ಗಳಿಸಿದ್ದರು. ದೇಶ-ವಿದೇಶಗಳ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದ ಅವರು 'ಕರ್ನಾಟಕ ಕಲಾಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು.

'ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾಗಿ ಗುರುತಿಸಿಕೊಂಡಿದ್ದ ಅಶೋಕ ಹುಗ್ಗಣ್ಣವರ ಸ್ನೇಹಜೀವಿಯಾಗಿದ್ದರು. ಅವರ ಶಿಷ್ಯಂದಿರೂ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದು ಅಶೋಕ ಅವರ ಸಂಗೀತ ಶೈಲಿ ಅವರ ಶಿಷ್ಯಪರಂಪರೆಯ ಮೂಲಕ ಸದಾ ಹಸಿರಾಗಿರುತ್ತದೆ'

ಕೃಷ್ಣಮೂರ್ತಿ ಭಟ್ಟ ಬೊಮ್ನಳ್ಳಿಹಿಂದೂಸ್ತಾನಿ ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.