ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹಿನ್ನೆಲೆ: ಬ್ಯಾನರ್ ತೆರವು

Last Updated 25 ಮಾರ್ಚ್ 2023, 16:21 IST
ಅಕ್ಷರ ಗಾತ್ರ

ಕಾರವಾರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಳವಡಿಸಲಾಗಿದ್ದ ರಾಜಕೀಯ ಪಕ್ಷಗಳು, ಸರ್ಕಾರಿ ಯೋಜನೆಗಳ ಪ್ರಚಾರದ ಬ್ಯಾನರ್ ಗಳನ್ನು ತೆರವುಗೊಳಿಸುವ ಕಾರ್ಯ ಚುರುಕಾಗಿದೆ.

‘ಚುನಾವೆಗೆ ಯಾವುದೇ ಕ್ಷಣದಲ್ಲಿಯೂ ದಿನ ಘೋಷಣೆಯಾಗಬಹುದು. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿರಿ’ ಎಂದು ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಶುಕ್ರವಾರದಿಂದಲೇ ನಗರ, ಪಟ್ಟಣ, ಗ್ರಾಮಾಂತರ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ.

ಕಳೆದ ಒಂದೆರಡು ತಿಂಗಳುಗಳಿಂದ ರಾಜಕೀಯ ಪಕ್ಷಗಳ ಸಮಾವೇಶ, ಜಾತ್ರೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳಿಗೆ ಶುಭಾಶಯ ಕೋರುವ ನೆಪದಲ್ಲಿ ರಾಜಕೀಯ ಮುಖಂಡರ ಬ್ಯಾನರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಇದು ಜನರಿಗೆ ಕಿರಿಕಿರಿಯನ್ನೂ ಉಂಟು ಮಾಡಿತ್ತು. ಅವುಗಳನ್ನು ಸಿಬ್ಬಂದಿ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಸರ್ಕಾರಿ ಯೋಜನೆಗಳ ಬ್ಯಾನರ್ ಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಲಾಗಿದೆ.

‘ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿಯ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ. ಆಡಳಿತಾರೂಢ ಬಿಜೆಪಿ ನಾಯಕರ ಬ್ಯಾನರ್ ತೆರವುಗೊಳಿಸದೆ ಕೇವಲ ವಿರೋಧ ಪಕ್ಷಗಳ ಮುಖಂಡರ ಭಾವಚಿತ್ರವಿದ್ದ ಬ್ಯಾನರ್, ಬಂಟಿಂಗ್ಸ್ ತೆಗೆಯಲಾಗಿತ್ತು’ ಎಂದು ಕುಮಟಾದ ಜೆಡಿಎಸ್ ಮುಖಂಡ ಸೂರಜ್ ಸೋನಿ ಆರೋಪಿಸಿದ್ದರು.

‘ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೆ ಪೂರ್ವದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಹೀಗಾಗಿ ನೀತಿ ಸಂಹಿತೆ ಜಾರಿಯಾದ ಬಳಿಕ ತಕ್ಷಣ ಏನೆಲ್ಲ ಕ್ರಮವಹಿಸಬೇಕೊ ಅವುಗಳನ್ನು ಮುಂಚಿತವಾಗಿ ಮಾಡಲಾಗುತ್ತಿದೆ. ಯಾವುದೇ ತಾರತಮ್ಯ ಎಸಗುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT