ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಕರ್ಯ ವಂಚಿತ ಬಸಾಪುರ

ಪಡಿತರ ಪಡೆಯಲು, ಪೇಟೆಗೆ ತೆರಳಲು ಗ್ರಾಮಸ್ಥರ ಪಡಿಪಾಟಲು
Published 19 ಜೂನ್ 2024, 4:43 IST
Last Updated 19 ಜೂನ್ 2024, 4:43 IST
ಅಕ್ಷರ ಗಾತ್ರ

ಮುಂಡಗೋಡ: ಕಳೆದ ಐದಾರು ದಶಕಗಳಿಂದ ‘ಮಜರೆ’ ಎಂದು ಗುರುತಿಸಿಕೊಂಡಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಮೂರು ಕಿ.ಮೀ ಅಂತರದಲ್ಲಿರುವ ಪಡಿತರ ಅಂಗಡಿಗೆ ಹೋಗಿ, ತಿಂಗಳ ರೇಷನ್‌ ತರುವುದು ಇಲ್ಲಿನ ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಕಂದಾಯ ಗ್ರಾಮ ಆಗಬೇಕೆಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ.

ತಾಲ್ಲೂಕಿನ ನಂದಿಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಕ್ಕೋರಲ ಕೂಗು ಗ್ರಾಮಸ್ಥರಿಂದ ಕೇಳಿಬರುತ್ತಿದೆ. ನೂರರಷ್ಟು ಮನೆಗಳಿರುವ 300ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಬಸಾಪುರದಲ್ಲಿ, ಸರ್ಕಾರಿ ಬಸ್‌ಗಳ ಓಡಾಟ ವಿರಳವಾಗಿದೆ. ಕಿತ್ತು ಹೋಗಿರುವ ರಸ್ತೆಯಿಂದ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಹಿಂಜರಿಯುತ್ತವೆ.

‘ಗ್ರಾಮದಲ್ಲಿ ಮುಖ್ಯವಾಗಿ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಆಗಬೇಕು. ವಯೋವೃದ್ಧರು, ಮಹಿಳೆಯರು ಪ್ರತಿ ಚುನಾವಣೆಯಲ್ಲಿ 2ರಿಂದ 3ಕಿ.ಮೀ ನಡೆದುಕೊಂಡು ಹೋಗಿ ಮತ ಚಲಾಯಿಸಬೇಕಾಗಿದೆ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಂದಾಯ ಗ್ರಾಮ ಎಂದು ಘೋಷಿಸಿದರೆ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಗ್ರಾಮ ಪಂಚಾಯಿತಿಗೆ ಈ ಗ್ರಾಮದ ಒಬ್ಬ ಜನಪ್ರತಿನಿಧಿ ಆಯ್ಕೆ ಆಗುವಂತ ವ್ಯವಸ್ಥೆ ಕಲ್ಪಿಸಿದರೆ, ನಮ್ಮೂರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಸಹಾಯವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರಾದ ಬಸವರಾಜ.

‘ಮಳೆಗಾಲಕ್ಕಿಂತ ಮುಂಚೆ ಚರಂಡಿ ಸ್ವಚ್ಛತೆ ಮಾಡಬೇಕು. ಆದರೆ, ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿದಂತೆ ಕಾಣುತ್ತವೆ. ನಂದಿಗಟ್ಟಾದಿಂದ ಬಸಾಪುರಕ್ಕೆ ಇರುವ ರಸ್ತೆಯನ್ನು ದುರಸ್ತಿಪಡಿಸಬೇಕು. ಗ್ರಾಮದಲ್ಲಿಯೇ ಪ್ರತ್ಯೇಕ ಪಡಿತರ ಅಂಗಡಿ ತೆರೆದರೆ ಜನರು ಕಿ.ಮೀಗಟ್ಟಲೇ ಪಡಿತರ ತಲೆ ಮೇಲೆ ಹೊತ್ತು ತರುವ ಭಾರವನ್ನು ಇಳಿಸಿದಂತಾಗುತ್ತದೆ. ಪ್ರತಿಭಟನೆಯ ನಂತರ ಮನೆ ಮನೆಗೆ ಕುಡಿಯುವ ನೀರು ಬರುತ್ತಿದೆ’ ಎಂದು ಗ್ರಾಮದ ಯುವಕ ರವಿಕುಮಾರ ಹೇಳಿದರು.

ಸ್ವಚ್ಛತೆ ಕಾಣದ ಚರಂಡಿಗಳು
ಸ್ವಚ್ಛತೆ ಕಾಣದ ಚರಂಡಿಗಳು

ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ

ಪ್ರತ್ಯೇಕ ಮತಗಟ್ಟೆ ಬೇಕು ಎಂಬ ಬಲವಾದ ಆಗ್ರಹ ಈಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಗ್ರಾಮಸ್ಥರಿಂದ ಕೇಳಿಬಂತು. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮತದಾನದ ದಿನದಂದು ಸಂಜೆವರೆಗೂ ಮತ ಚಲಾಯಿಸಲು ಗ್ರಾಮಸ್ಥರು ಹಿಂದೇಟು ಹಾಕಿದ್ದರು. ಕೊನೆಗೆ ಅಧಿಕಾರಿಗಳ ಭರವಸೆ ನಂತರ ಮತದಾನ ಮಾಡಿದ್ದರು. ಇಂತಹ ಗ್ರಾಮದಲ್ಲಿ ಹತ್ತು ಹಲವಾರು ಸಮಸ್ಯೆಗಳು ಕಣ್ಣೆದುರಿಗೆ ಕಾಣುತ್ತವೆ. ಅಸಮರ್ಪಕ ಚರಂಡಿ ಬೀದಿದೀಪ ವ್ಯವಸ್ಥೆ ಮನೆಗಳಿದ್ದರೂ ಅರಣ್ಯ ಭೂಮಿಯ ಸಮಸ್ಯೆಯಿಂದ ದಾಖಲಾತಿಯ ಸಮಸ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕೆಂದರೂ ಕಿ.ಮೀ.ಗಟ್ಟಲೇ ನಡೆಯಬೇಕು ಹೀಗೆ ಹಲವು ಸಮಸ್ಯೆಗಳು ಇಲ್ಲಿನ ಜನರನ್ನು ಕಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT