ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ಮುಸ್ಲಿಮರ ಓಲೈಕೆ: ಸಂಸದ ಕಾಗೇರಿ

Published 9 ಜುಲೈ 2024, 12:57 IST
Last Updated 9 ಜುಲೈ 2024, 12:57 IST
ಅಕ್ಷರ ಗಾತ್ರ

ಭಟ್ಕಳ: ‘ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್‌ಗಾಗಿ ಮಾತ್ರ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ. ಅವರು ದೇಶದ ಮುಖ್ಯವಾಹಿನಿಯಲ್ಲೇ ಇರಬೇಕು, ಕಾಂಗ್ರೆಸ್ಸಿನ ಯಾವುದೇ ಷಡ್ಯಂತ್ರಕ್ಕೆ ಬಲಿಯಾಗಬಾರದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರರು. 

ಪಟ್ಟಣದ ಆಸರಕೇರಿ ತಿರುಮಲ ವೆಂಕಟ್ರಮಣ ಸಭಾಭವನದಲ್ಲಿ ಬಿಜೆಪಿ ಮಂಡಲದ ವತಿಯಿಂದ ಮಂಗಳವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಮುಸ್ಲಿಮರು ಬಿಜೆಪಿ ವಿರುದ್ಧದ ಮತ ಚಲಾಯಿಸುವ ಮಾನಸಿಕತೆ ಬದಲಾಯಿಸಿಕೊಳ್ಳಬೇಕು. ಒಂದೇ ಕಡೆ ಮತ ಚಲಾಯಿಸುವ ಮನಸ್ಥಿತಿ ಎಂದಿಗೂ ಒಳ್ಳೆಯದಲ್ಲ. ಅಲ್ಪಸಂಖ್ಯಾತರು ಸರಿ ತಪ್ಪಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಒಳಗಾಗಬಾರದು’ ಎಂದರು.

‘ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಜಾರಿಗೊಳಿಸಲು ಶ್ರಮಿಸುತ್ತೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಈಗಾಗಲೇ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಮುಂದಿನ ತಿಂಗಳಲ್ಲಿ ಕೇಂದ್ರದ ಅಧಿಕಾರಿಗಳು ಜಿಲ್ಲೆಗೆ ಬಂದು ಸಮಸ್ಯೆ ಪರಿಶೀಲಿಸಲಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಅತಿಕ್ರಮಣ ಸಕ್ರಮಣ, ಹೆದ್ದಾರಿ, ಮೀನುಗಾರಿಕೆ, ರೈಲ್ವೆ, ಪ್ರವಾಸೋದ್ಯಮ, ನಿರುದ್ಯೋಗ ಹೀಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಇದನ್ನು ಹಂತಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ, ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ, ಡಾ.ಜಿ.ಜಿ ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹೇಮಂತ ಗಾಂವಕರ್ ಇದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧನ್ಯಕುಮಾರ ಜೈನ್ ನಿರೂಪಿಸಿದರು. ಬಿಜೆಪಿ ಮಂಡಲ ಸೇರಿದಂತೆ ವಿವಿಧ ಮೋರ್ಚಾ, ಸಂಘ– ಸಂಸ್ಥೆಗಳಿಂದ ಸಂಸದ ಕಾಗೇರಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT