ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅಡ್ಡಾದಿಡ್ಡಿ ಲಂಗರು ಹಾಕಿದರೆ ದೋಣಿಗೆ ದಂಡ

ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ
Last Updated 22 ಸೆಪ್ಟೆಂಬರ್ 2020, 16:06 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಆಶ್ರಯ ಪಡೆಯುವ ಹೊರ ಜಿಲ್ಲೆಗಳು ಮತ್ತು ರಾಜ್ಯಗಳ ದೋಣಿಗಳನ್ನು ನಿಗದಿತ ಸ್ಥಳದಲ್ಲೇ ಲಂಗರು ಹಾಕಬೇಕು. ತಪ್ಪಿದರೆ ದಂಡ ವಿಧಿಸಿ, ರಿಯಾಯಿತಿ ದರದ ಡೀಸೆಲ್ ಪೂರೈಕೆ ನಿಲ್ಲಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಮುದ್ರದಲ್ಲಿ ಚಂಡಮಾರುತದಂತಹ ಹವಾಮಾನ ವೈಪರೀತ್ಯವಾದಾಗ ಹೊರ ಜಿಲ್ಲೆಗಳ ಹಾಗೂ ರಾಜ್ಯಗಳ ನೂರಾರು ಮೀನುಗಾರಿಕಾ ದೋಣಿಗಳು ಇಲ್ಲಿಗೆ ಮರಳುತ್ತವೆ. ಆದರೆ, ಅವುಗಳನ್ನು ಶಿಸ್ತು ಬದ್ಧವಾಗಿಡದೇ ಎಲ್ಲೆಂದರಲ್ಲಿ ಲಂಗರು ಹಾಕಲಾಗುತ್ತಿದೆ. ಇದರಿಂದ ವಾಣಿಜ್ಯ ಬಂದರಿನ ಹಾಗೂ ಕೋಸ್ಟ್‌ ಗಾರ್ಡ್‌ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ವಾಣಿಜ್ಯ ಬಂದರಿಗೆ ವಿದೇಶಗಳಿಂದ ಬಿಟುಮಿನ್ ತರುವ ಹಡಗು, ಅವುಗಳಿಗೆ ಮಾರ್ಗದರ್ಶನ ಮಾಡುವ ಟಗ್‌, ಕೋಸ್ಟ್ ಗಾರ್ಡ್‌ನ ದೋಣಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಬೈತಖೋಲ್ ಮೀನುಗಾರಿಕಾ ಬಂದರು, ವಾಣಿಜ್ಯ ಬಂದರು, ಅಲೆ ತಡೆಗೋಡೆ, ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸುತ್ತಮುತ್ತ ಮೂರು ದಿನಗಳಿಂದ 500ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಆಶ್ರಯ ಪಡೆದಿವೆ.

ಎರಡೂ ಬಂದರುಗಳಿಗೆ ಸಾಗುವ ಕಾಲುವೆಯು ಒಂದೇ ಆಗಿದ್ದು, ಕಿರಿದಾಗಿದೆ. ಇಲ್ಲಿ ಅನಿವಾರ್ಯವಾಗಿ ಬಹಳ ಹತ್ತಿರ ಲಂಗರು ಹಾಕುವುದರಿಂದ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಗಳು ಪರಸ್ಪರ ಬಡಿದು ಹಾನಿಯಾಗಿವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಪದೇಪದೇ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನೇತೃತ್ವದಲ್ಲಿ ಅಧಿಕಾರಿಗಳು ಸೋಮವಾರ ಸಂಜೆ ಸ್ಥಳ ಪರಿಶೀಲನೆ ಮಾಡಿದರು.

ದೋಣಿಗಳನ್ನು ಎಲ್ಲೆಂದರಲ್ಲಿ ಲಂಗರು ಹಾಕುವುದರಿಂದ ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ದೋಣಿಗಳನ್ನು ಅಲೆ ತಡೆಗೋಡೆ ಸಮೀಪವೇ ನಿಲ್ಲಿಸಲು ಸೂಚಿಸಲಾಗಿದೆ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಅನಿವಾರ್ಯವಾಗಿ ಕಾರವಾರ ಬಂದರಿಗೆ ಮರಳುವ ಇತರ ಜಿಲ್ಲೆಗಳ ಮೀನುಗಾರಿಕಾ ದೋಣಿಗಳನ್ನು ಶಿಸ್ತುಬದ್ಧವಾಗಿ ಲಂಗರು ಹಾಕಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ ಎಂದುಪಿ.ನಾಗರಾಜು ಪ್ರತಿಕ್ರಿಯಿಸಿದರು.

ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು, ಬಂದರು ಅಧಿಕಾರಿ ಸುರೇಶ ಶೆಟ್ಟಿ, ಕರಾವಳಿ ಕಾವಲು ಪಡೆಯ ಇನ್‌ಸ್ಪೆಕ್ಟರ್ ಚಂದ್ರಶೇಖರ ಹರಿಹರ, ಗ್ರಾಮೀಣ ಠಾಣೆ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಕುಮಾರ ಶೆಟ್ಟಿ ಹಾಗೂ ಕೋಸ್ಟ್‌ಗಾರ್ಡ್‌ನ ಅಸಿಸ್ಟೆಂಟ್ ಕಮಾಂಡೆಂಟ್ ಸುಬ್ರಘೋಷ್ ಕೂಡ ಜೊತೆಗಿದ್ದರು.

ಸಭೆಯ ನಿರ್ಣಯಗಳು

* ನಿಗದಿತ ಸ್ಥಳದಲ್ಲೇ ಲಂಗರು ಹಾಕಲು ಮೀನುಗಾರರಿಗೆ ಸೂಚಿಸುವಂತೆ ಉಡುಪಿ ಮತ್ತು ದಕ್ಷಿಣ ಕನ್ನಡದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆಯುವುದು.

* ಸೂಚನೆ ಮೀರಿದ ದೋಣಿಗಳಿಗೆ ದಂಡ ವಿಧಿಸುವುದು. ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಕೆ ನಿಲ್ಲಿಸಲು ಕ್ರಮ ಕೈಗೊಳ್ಳುವುದು.

* ಕೋಸ್ಟ್‌ಗಾರ್ಡ್ ಮತ್ತು ವಾಣಿಜ್ಯ ಬಂದರಿನ ಹಡಗು, ದೋಣಿಗಳ ಸಂಚಾರಕ್ಕೆ 50 ಮೀಟರ್ ದಾರಿಯಲ್ಲಿ 10 ‘ಬಾಯ್’ಗಳನ್ನು ಇಡುವುದು.

* ಈ ವ್ಯವಸ್ಥೆ ಆಗುವ ತನಕ ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆದು ಬೆಳಿಗ್ಗೆ 7ರಿಂದ 9 ಹಾಗೂ ಸಂಜೆ 3ರಿಂದ 5ರವರೆಗೆ ಕಾರ್ಯಾಚರಣೆ ನಡೆಸುವುದು. ಈ ಮೂಲಕ ಕೋಸ್ಟ್‌ಗಾರ್ಡ್ ದೋಣಿಗಳ ಸಂಚಾರಕ್ಕೆ ಅನುವು ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT