ಮಂಗಳವಾರ, ಮಾರ್ಚ್ 21, 2023
21 °C
ಉಪ್ಪು ನೀರಿನ ಸಮಸ್ಯೆ ಎದುರಿಸುತ್ತಿರುವ ಮಾಜಾಳಿಯ ಹಳ್ಳಿಗಳು

ಕಾರವಾರ: ಗಡಿಭಾಗದ ಗ್ರಾ.ಪಂ.ಗೆ ಅನುದಾನದ ನಿರೀಕ್ಷೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಮಾಜಾಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿಯ ಪಥದಲ್ಲಿದ್ದರೂ ನಿರೀಕ್ಷಿತ ಗುರಿ ಸಾಧಿಸಲು ವಿಶೇಷ ಅನುದಾನದ ನಿರೀಕ್ಷೆಯಲ್ಲಿದೆ. ಗಡಿಭಾಗದ ಅಭಿವೃದ್ಧಿಗೆ ಒತ್ತು ನೀಡುವ ಸರ್ಕಾರ ಗಡಿಭಾಗದಲ್ಲಿರುವ ಈ ಪಂಚಾಯ್ತಿಯತ್ತ ದೃಷ್ಟಿ ಹಾಯಿಸಬಹುದು ಎಂಬುದು ಇಲ್ಲಿನ ಜನರ ಕನಸು.

ಎರಡು ಎಂಜಿನಿಯರಿಂಗ್ ಕಾಲೇಜ್ ಹೊಂದಿರುವ ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾಜಾಳಿಯ ಪಕ್ಕದಲ್ಲೇ ಗೋವಾ ರಾಜ್ಯವಿದೆ. ಕಪ್ಪು ಮರಳಿನ ತೀಳಮಾತಿ ಕಡಲತೀರ ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಇಂತಹ ಹಲವು ವೈಶಿಷ್ಟ್ಯಗಳ ಜತೆಗೆ ಸಮಸ್ಯೆಗಳ ಸರಮಾಲೆಯೂ ಗ್ರಾಮವನ್ನು ಸುತ್ತಿಕೊಂಡಿದೆ.

ಮಾಜಾಳಿ, ಕೊಠಾರದಲ್ಲಿ ಹಾದುಹೋದ ಮಾವಿನಹೊಳೆ ಅರಬ್ಬಿ ಸಮುದ್ರದ ಉಬ್ಬರದ ಕಾಲದಲ್ಲಿ ಹೊತ್ತು ತರುವ ಉಪ್ಪುನೀರು ಈ ಗ್ರಾಮಗಳ ಜಲಮೂಲಗಳನ್ನು ಸವುಳಾಗಿಸುತ್ತದೆ ಎಂಬುದು ಜನರ ದೂರು.

‘ಬೇಸಿಗೆಯಲ್ಲಿ ನೀರಿನ ಕೊರತೆಯ ವಿಪರೀತ ಸಮಸ್ಯೆ ಉಂಟಾಗುತ್ತದೆ. ಬಾವಿಗಳಿದ್ದರೂ ಉಪ್ಪು ನೀರು ನುಗ್ಗುವ ಕಾರಣ ಕುಡಿಯಲು ಆಗುತ್ತಿಲ್ಲ. ಹಲವು ವರ್ಷಗಳಿಂದ ಸಮಸ್ಯೆ ಉಂಟಾಗುತ್ತಿದ್ದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಕೊಠಾರದ ನಿವಾಸಿ ಪ್ರಶಾಂತಿ ಅಸ್ನೋಟಿಕರ್.

‘ರಾಷ್ಟ್ರೀಯ ಹೆದ್ದಾರಿಯಿಂದ ಮಾಜಾಳಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆ ಕೆಲಸ ಪೂರ್ಣಗೊಳಿಸಿಲ್ಲ. ಕಾಂಕ್ರೀಟ್ ರಸ್ತೆ ನಿರ್ಮಾಣವಾದರೂ ಇನ್ನೂ ಅರ್ಧ ಕಿ.ಮೀ. ದೂರದ ರಸ್ತೆ ಹಾಗೆಯೇ ಬಿಟ್ಟಿದ್ದಾರೆ. ದೇವತಿ ದೇವಸ್ಥಾನಕ್ಕೆ ತೆರಳುವ ಈ ರಸ್ತೆ ಪ್ರತಿನಿತ್ಯ ನೂರಾರು ಜನರ ಓಡಾಟಕ್ಕೆ ಬಳಕೆಯಾಗುತ್ತಿದೆ. ದುಃಸ್ಥಿತಿಯ ರಸ್ತೆಯಲ್ಲೇ ಸಾಗಬೇಕಾಗುತ್ತಿದೆ’ ಎನ್ನುತ್ತಾರೆ ಮಾಜಾಳಿಯ ದೇವಿದಾಸ ನಾಯ್ಕ.

‘ಒಳಭಾಗದ ಹಳ್ಳಿಗಳಿಗೆ ಬಸ್ ಸೌಕರ್ಯದ ಕೊರತೆ ಇದೆ. ಸಿಟಿ ಬಸ್ ಸಕಾಲಕ್ಕೆ ಬರುತ್ತಿಲ್ಲ. ಈ ಹಿಂದೆ ಗೋವಾ ರಾಜ್ಯದ ಕದಂಬ ಬಸ್ ಹೆದ್ದಾರಿಯಿಂದ ಒಳ ಹಳ್ಳಿಗೆ ಬಂದು ಹೋಗುತ್ತಿತ್ತು. ಕಾರವಾರದಿಂದ ಬರುವ ಬಸ್‍ಗಳು ಸಮಯಕ್ಕೆ ಸರಿಯಾಗಿದ್ದವು. ಈಚೆಗೆ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆಪಡುತ್ತಿದ್ದಾರೆ’ ಎಂದು ಸಮಸ್ಯೆ ವಿವರಿಸಿದರು.

ಘಟಕಕ್ಕೆ ಜಾಗ ಪಡೆಯಲು ಯತ್ನ

‘ಮಾಜಾಳಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆ ಜಾರಿಗೆ ತರುವುದು ಕಷ್ಟವಾಗಿದೆ. ಇಲ್ಲಿನ ಬಹುತೇಕ ಜನ ಕಾರವಾರ ನಗರ, ಪಕ್ಕದ ಗೋವಾಕ್ಕೆ ಉದ್ಯೋಗದ ನಿಮಿತ್ತ ತೆರಳುತ್ತಾರೆ. ಮೀನುಗಾರಿಕೆ ವೃತ್ತಿ ನಡೆಸುವವರೂ ಹೆಚ್ಚಿದ್ದಾರೆ. ಹೀಗಾಗಿ ಸರ್ಕಾರ ನಿಗದಿಪಡಿಸಿದ ಕೂಲಿ ದರಕ್ಕೆ ಕೆಲಸಕ್ಕೆ ಬರುವವರು ಕಡಿಮೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಪಿಡಿಒ ಸಾಧನಾ ಚೆಂಡಿಯೇಕರ್.

‘ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಹುಡುಕಾಟ ನಡೆಸಲಾಗುತ್ತಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸಮೀಪ ಐದು ಗುಂಟೆ ಜಾಗಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ ಅದು ಲಭಿಸದ ಕಾರಣ ಬೇರೆ ಜಾಗ ಹುಡುಕಾಡುತ್ತಿದ್ದೇವೆ. ಜನಸಂಖ್ಯೆ ಹೆಚ್ಚಿರುವ ಕಾರಣ ವಿಲೇವಾರಿ ಘಟಕ ನಿರ್ಮಾಣದ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

*
ರಾಜ್ಯದ ಗಡಿಭಾಗದಲ್ಲಿರುವ ಮಾಜಾಳಿ ಗ್ರಾಮ ಪಂಚಾಯ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕಾಗಿದೆ.
-ಕೃಷ್ಣ ಮಾಳ್ಸೇಕರ್, ಮಾಜಾಳಿ ಗ್ರಾ.ಪಂ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು