ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ನೆರಳು ಒದಗಿಸಿದ ‘ಕ್ಯಾಬಿನ್ ಕಂಟೇನರ್’

ಜಿಲ್ಲೆಯ ಏಳು ಕಡೆಗಳಲ್ಲಿ ಅಳವಡಿಕೆ: ಸುರಕ್ಷತೆಗೆ ಅನುಕೂಲ
Published 20 ಮಾರ್ಚ್ 2024, 15:57 IST
Last Updated 20 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೂರು ಅಂತರ್ ರಾಜ್ಯ ಸೇರಿದಂತೆ ಒಟ್ಟು 25 ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿದ್ದು ನಿರಂತರ ತಪಾಸಣೆ ನಡೆಯುತ್ತಿದೆ. ಅರಣ್ಯ, ನಿರ್ಜನ ಸ್ಥಳದಲ್ಲಿರುವ ಚೆಕ್‍ಪೋಸ್ಟ್ ಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಕ್ಯಾಬಿನ್ ಕಂಟೇನರ್ ಒದಗಿಸಲಾಗಿದೆ.

ಏಳು ಚೆಕ್‍ಪೋಸ್ಟ್‌ಗಳಿಗೆ ಕ್ಯಾಬಿನ್ ಕಂಟೇನರ್ ಒದಗಿಸಿದ್ದು, ಕಬ್ಬಿಣದಿಂದ ಸಿದ್ಧಪಡಿಸಿದ ಪೆಟ್ಟಿಗೆ ಮಾದರಿಯ ಸಂಚಾರ ಕೋಣೆಯಂತಿದೆ. ಸೆಕೆ ನಿಯಂತ್ರಿಸುವ ಸಲುವಾಗಿ ಕೋಣೆಯ ಒಳಭಾಗದಲ್ಲಿ ಮರದಿಂದ ಹಲಗೆ ಜೋಡಿಸಲಾಗಿದೆ. ಫ್ಯಾನ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ವಿಶ್ರಾಂತಿಗೆ ಸ್ಥಳಾವಕಾಶ ಇದೆ.

ಅರಣ್ಯ ಪ್ರದೇಶ ಹಾಗೂ ನಿರ್ಜನ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಕಾರವಾರ ತಾಲ್ಲೂಕಿನ ಮೈಂಗಿಣಿ, ಮುಂಡಗೋಡ ತಾಲ್ಲೂಕಿನ ಸನವಳ್ಳಿ, ಬಾಚಣಕಿ, ಶಿರಸಿ ತಾಲ್ಲೂಕಿನ ತಿಗಣಿ, ಸಿದ್ದಾಪುರ ತಾಲ್ಲೂಕಿನ ಚೂರಿಕಟ್ಟೆ, ಜೊಯಿಡಾ ತಾಲ್ಲೂಕಿನ ರಾಮನಗರ, ಸಿದ್ದಾಪುರ ತಾಲ್ಲೂಕಿನ ಶಿರಳಗಿಯ ಚೆಕ್‍ಪೋಸ್ಟ್‌ಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.

‘ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಹೊಸ ಮಾದರಿಯ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಪರಿಚಯಿಸಲಾಗಿತ್ತು. ಪ್ರತಿ ಕ್ಯಾಬಿನ್ ಕಂಟೇನರ್ ಸುಮಾರು ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ಇವುಗಳನ್ನು ಚೆಕ್‍ಪೋಸ್ಟ್‌ಗಳಿಗೆ ಒದಗಿಸಲಾಗಿದೆ. ರಾತ್ರಿ ವೇಳೆ ಕಾಡುಪ್ರಾಣಿಗಳಿಂದ ರಕ್ಷಣೆಗೆ, ಮಹಿಳಾ ಸಿಬ್ಬಂದಿ ಇದ್ದರೆ ವಿಶ್ರಾಂತಿಗೆ ಹೊಸ ಮಾದರಿಯ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ತಿಳಿಸಿದರು.

‘ಕ್ಯಾಬಿನ್ ಕಂಟೇನರ್ ಸೌಲಭ್ಯ ಅನುಕೂಲವಾಗಿದೆ. ವಾಹನಗಳ ಓಡಾಟ ಕಡಿಮೆ ಇದ್ದ ಅವಧಿಯಲ್ಲಿ ಬಿಸಿಲಿನಿಂದ ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ. ಹಲವು ವರ್ಷದಿಂದ ಚುನಾವಣೆ ಕರ್ತವ್ಯ ಮಾಡುತ್ತಿದ್ದರೂ ಈ ಬಾರಿ ಕರ್ತವ್ಯಕ್ಕೆ ಹೊಸ ಮಾದರಿಯ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಅನುಕೂಲವಾಗಿದೆ’ ಎಂದು ಮೈಂಗಿಣಿ ಚೆಕ್‍ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT