ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಮೀನುಗಾರರ ಕೈಹಿಡಿದ ‘ಪಂಜರ ಕೃಷಿ’

ಕಾಳಿನದಿಯಲ್ಲಿ ಸಾಮೂಹಿಕವಾಗಿ ಕುರುಡೆ ಮೀನು ಬೆಳೆದು ಲಾಭ ಗಳಿಕೆ
Published 2 ಫೆಬ್ರುವರಿ 2024, 4:59 IST
Last Updated 2 ಫೆಬ್ರುವರಿ 2024, 4:59 IST
ಅಕ್ಷರ ಗಾತ್ರ

ಕಾರವಾರ: ನಗರದ ಅಂಚಿನಲ್ಲಿ ಹಾದುಹೋದ ಕಾಳಿನದಿ ಕಾರವಾರಕ್ಕೆ ಪ್ರಾಕೃತಿಕ ಸೌಂದರ್ಯ ಕೊಟ್ಟಿರುವುದರ ಜತೆಗೆ ನೀಲಿಕಲ್ಲು, ಮೀನುಗಳ ಆವಾಸ ಸ್ಥಾನವಾಗಿಯೂ ಹೆಸರಾಗಿದೆ. ಕಳೆದ ಐದು ವರ್ಷಗಳಿಂದ ನಂದನಗದ್ದಾ ಭಾಗದ ಹತ್ತಾರು ಕುಟುಂಬಗಳಿಗೆ ‘ಮೀನಿನ ಪಂಜರು ಕೃಷಿ’ ಮೂಲಕ ಆದಾಯ ತಂದುಕೊಟ್ಟು ವರವಾಗಿ ಪರಿಣಮಿಸಿದೆ.

ನಂದನಗದ್ದಾದ ಜೋಶಿವಾಡಾ, ಇತರ ಭಾಗದ ಹಲವು ಮೀನುಗಾರ ಕುಟುಂಬಗಳು ಮೀನು ಪಂಜರು ಕೃಷಿ ಆರಂಭಿಸಿ ಯಶಸ್ಸು ಸಾಧಿಸಿವೆ. ಈ ಭಾಗದಲ್ಲಿ ಹೊಸ ಮಾದರಿಯ ಕೃಷಿ ಪರಿಚಯಿಸಿದ್ದನ್ನು ಅನುಕೂಲವಾಗಿಸಿಕೊಂಡ ಸುಧೀರ ಪಾಂಡುರಂಗ ಸಾರಂಗ, ಇತರರು ಕ್ವಿಂಟಲ್‍ಗಟ್ಟಲೆ ಕುರುಡೆ ಮೀನು ಬೆಳೆದು ವಾರ್ಷಿಕವಾಗಿ ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.

‘2018ರಲ್ಲಿ ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿ.ಎಂ.ಎಫ್.ಆರ್.ಐ) ಕಾಳಿನದಿಯಲ್ಲಿ ಮೀನನ್ನು ಪಂಜರು ಕೃಷಿ ಮೂಲಕ ಬೆಳೆಯುವ ಪದ್ಧತಿಯನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿತು. ಸ್ಥಳೀಯವಾಗಿ 21 ಜನರ ತಂಡವನ್ನು ರಚಿಸಿಕೊಂಡು ಪ್ರಾಯೋಗಿಕ ಕೃಷಿ ನಡೆಸಿದೆವು. ಅದರಲ್ಲಿ ಸಿಕ್ಕ ಯಶಸ್ಸು ಈಗ ಕುಟುಂಬ ಮುನ್ನಡೆಸಲು ಅಗತ್ಯ ಆದಾಯ ತಂದುಕೊಡುತ್ತಿದೆ’ ಎನ್ನುತ್ತಾರೆ ಮೀನಿನ ಪಂಜರು ಕೃಷಿಯಲ್ಲಿ ಸಕ್ರೀಯವಾಗಿರುವ ಸುಧೀರ ಸಾರಂಗ.

‘28 ಪಂಜರುಗಳಲ್ಲಿ ಸದ್ಯ ಮೀನು ಸಾಕಣೆ ಮಾಡಲಾಗುತ್ತಿದೆ. ಒಬ್ಬಿಬ್ಬರು ಮಾತ್ರ ಎರಡರಿಂದ ಮೂರು ಪಂಜರದಲ್ಲಿ ಕೃಷಿ ಮಾಡಿದರೆ, ಕೆಲವರು ತಲಾ ಒಂದು ಪಂಜರದಲ್ಲಿ ಕೃಷಿ ಮಾಡುತ್ತಾರೆ. ಪ್ರತಿ ಪಂಜರದಲ್ಲಿ ತಲಾ ಒಂದು ಕೆ.ಜಿ ಕುರುಡೆ ಮೀನಿನ ಮರಿಗಳನ್ನು ಡಿಸೆಂಬರ್ ನಿಂದ ಫೆಬ್ರವರಿ ಅವಧಿಯೊಳಗೆ ಬಿಡಲಾಗುತ್ತದೆ. ಸರಾಸರಿ ಒಂದು ಸಾವಿರದಷ್ಟು ಮರಿಗಳು ಪಂಜರ ಸೇರುತ್ತವೆ. ಅವುಗಳನ್ನು ಪೋಷಿಸಲು ಅಗತ್ಯ ಆಹಾರ ನೀಡಲಾಗುತ್ತದೆ. ವರ್ಷಕ್ಕೆ ಮೂರು ಬಾರಿ ಬಲೆ ಬದಲಿಸಬೇಕಾಗುತ್ತದೆ. ಒಂದು ವರ್ಷದ ಬಳಿಕ ಬೆಳವಣಿಗೆ ಹೊಂದಿದ ಮೀನುಗಳನ್ನು ತೆಗೆದು ಮಾರಾಟ ಮಾಡುತ್ತೇವೆ’ ಎಂದು ಕೃಷಿ ಪದ್ಧತಿ ವಿವರಿಸಿದರು.

‘ಪಂಜರವೊಂದರಲ್ಲಿ ಮೀನು ಸಾಕಲು ಸರಾಸರಿ ₹1 ಲಕ್ಷದಿಂದ ₹1.5 ಲಕ್ಷ ವೆಚ್ಚವಾಗುತ್ತದೆ. ಸೂಕ್ತ ಆರೈಕೆ ಮಾಡಿದರೆ ಕನಿಷ್ಠ 600 ರಿಂದ 700 ಮರಿಗಳು ಕೈಗೆ ಸಿಗುತ್ತವೆ. ಪ್ರತಿ ಕೆ.ಜಿ.ಗೆ ಸರಾಸರಿ ₹500 ರಂತೆ ₹3 ಲಕ್ಷದಷ್ಟು ಆದಾಯ ಗಳಿಕೆ ಸಾಧ್ಯವಾಗುತ್ತದೆ’ ಎಂದು ಕೃಷಿಯಿಂದ ಗಳಿಸುವ ಆದಾಯದ ಬಗ್ಗೆ ವಿವರಿಸಿದರು.

‘ಸಮುದ್ರಕ್ಕೆ ಸಮೀಪದಲ್ಲೇ ಪಂಜರುಗಳಿರುವುದರಿಂದ ಮೀನುಗಳಿಗೆ ಲವಣಯುಕ್ತ ನೀರು, ಸಿಹಿ ನೀರು ಎರಡೂ ಸಿಗುತ್ತವೆ. ಅವುಗಳಿಂದ ಇಲ್ಲಿ ಬೆಳೆಸುವ ಕುರುಡೆ ಮೀನಿಗೆ ರುಚಿ ಹೆಚ್ಚು. ಹೀಗಾಗಿ ಉತ್ತಮ ಬೇಡಿಕೆಯೂ ಇದೆ’ ಎಂದರು.

ಕಾರವಾರದ ನಂದನಗದ್ದಾದ ಬಳಿಯ ಕಾಳಿನದಿಯಲ್ಲಿ ಪಂಜರದಲ್ಲಿ ಬೆಳೆಸಲಾಗುತ್ತಿರುವ ಕುರುಡೆ ಮೀನಿನ ಮರಿಗೆ ಮೀನುಗಾರರೊಬ್ಬರು ಆಹಾರ ಪೂರೈಸುತ್ತಿರುವುದು
ಕಾರವಾರದ ನಂದನಗದ್ದಾದ ಬಳಿಯ ಕಾಳಿನದಿಯಲ್ಲಿ ಪಂಜರದಲ್ಲಿ ಬೆಳೆಸಲಾಗುತ್ತಿರುವ ಕುರುಡೆ ಮೀನಿನ ಮರಿಗೆ ಮೀನುಗಾರರೊಬ್ಬರು ಆಹಾರ ಪೂರೈಸುತ್ತಿರುವುದು

ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ನಮಗೆ ಮೀನಿನ ಪಂಜರು ಕೃಷಿ ವಾರ್ಷಿಕವಾಗಿ ಒಂದೇ ಬಾರಿಗೆ ದೊಡ್ಡ ಆದಾಯ ತಂದುಕೊಡುತ್ತಿದೆ. ಇದರಿಂದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ದಾರಿಯಾಗಿದೆ

-ಸುಧೀರ ಸಾರಂಗ ಕೃಷಿಕ

ಸಹಾಯಧನವೂ ಲಭ್ಯ

‘ಪ್ರಧಾನಮಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿ ಮೀನಿನ ಪಂಜರು ಕೃಷಿಗೆ ಸಹಾಯಧನ ನೀಡಲಾಗುತ್ತದೆ. ಪಂಜರು ಅಳವಡಿಕೆಗೆ ತಗಲುವ ₹3 ಲಕ್ಷ ಘಟಕ ವೆಚ್ಚಕ್ಕೆ ಮಹಿಳೆಯರಿಗೆ ಶೇ.60 ರಷ್ಟು ಪುರುಷರಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುತ್ತದೆ. ಘಟಕ ನಿರ್ಮಿಸಿದ ಒಂದು ವರ್ಷದ ಬಳಿಕ ಪ್ರತಿ ಕೆ.ಜಿ ಮೀನುಮರಿ ಖರೀದಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯಲ್ಲಿ 128 ಮೀನುಗಾರರು ಸದ್ಯ ಪಂಜರ ಕೃಷಿಯಲ್ಲಿ ತೊಡಗಿದ್ದು ಹೊಸ ಘಟಕಕ್ಕೆ 250ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT