ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ | ನಕಲಿ ದಾಖಲೆ ನೀಡಿ ಕಾರು ಸಾಲ: ವಂಚನೆ

Published 28 ಮೇ 2024, 14:35 IST
Last Updated 28 ಮೇ 2024, 14:35 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಮಂಚಿಕೇರಿಯ ಕೆಡಿಸಿಸಿ ಬ್ಯಾಂಕಿಗೆ ವ್ಯಕ್ತಿಯೊಬ್ಬರು ನಕಲಿ ದಾಖಲೆ ನೀಡಿ ಕಾರ್‌ ಸಾಲ ಪಡೆದು ವಂಚಿಸಿದ್ದಾರೆ. ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕ ರಾಮಕೃಷ್ಣ ಗಣಪತಿ ಉಪಾಧ್ಯ ಯಲ್ಲಾಪುರ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ʻಶಿರಸಿ ತಾಲ್ಲೂಕಿನ ಬೈರುಂಬೆ ಗ್ರಾಮದ ರಾಜಾರಾಮ ರಾಮಚಂದ್ರ ಹೆಗಡೆ ದೇವರಕೇರಿ ಎಂಬುವವರು ಕಾರು ಖರೀದಿಸಲು ₹ 15 ಲಕ್ಷ ಸಾಲ ಬೇಕೆಂದು ಮಂಚಿಕೇರಿಯ ಕೆಡಿಸಿಸಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿ; ಅಗತ್ಯ ದಾಖಲೆಗಳನ್ನು ನೀಡಿದ್ದರು. ಮುಂಡಗೋಡ ತಾಲ್ಲೂಕಿನ ಚಿಪಗೇರಿಯ ಮಹಾಬಲೇಶ್ವರ ರಾಮಕೃಷ್ಣ ಹೆಗಡೆ ಹಾಗೂ ಶಿರಸಿ ತಾಲ್ಲೂಕು ಲಂಡಕನಹಳ್ಳಿಯ ದಿನೇಶ ಲವು ಚಿಂಚ್ರೇಕರ ಸಾಲಪತ್ರಕ್ಕೆ ಜಾಮೀನು ಸಹಿ ಹಾಕಿದ್ದರು. ಬ್ಯಾಂಕ್‌ ಸಾಲ ಮಂಜೂರು ಮಾಡಿ ಹಣವನ್ನು ಆರ್‌ಟಿಜಿಎಸ್‌ ಮೂಲಕ ಕಾರು ಮಾರಾಟಗಾರರಾದ ಕೆನರಾ ಮೋಟರ್ಸ್‌ ಪ್ರೈ.ಲಿ.ಗೆ ವರ್ಗಾವಣೆ ಮಾಡಿತ್ತು.

‘ನಂತರ ಆರೋಪಿ ಕಾರು ಖರೀದಿದಾರ ಹಣ ಜಮಾ ಮಾಡಿದ ಬಗ್ಗೆ ಪಾವತಿ, ಟ್ಯಾಕ್ಸ್‌ ಇನ್‌ವೈಸ್‌, ವಿಮಾ ಪಾವತಿ, ಚಾವಿ, ಸಾರಿಗೆ ಇಲಾಖೆಗೆ ಟ್ಯಾಕ್ಸ್‌ ತುಂಬಿದ ಪಾವತಿ, ತಾತ್ಕಾಲಿಕ ನೋಂದಣಿ ಸಂಖ್ಯೆ ಸೇರಿದಂತೆ ಎಲ್ಲ ಕಾಗದಪತ್ರಗಳನ್ನು ಬ್ಯಾಂಕಿಗೆ ಒದಗಿಸಿದ್ದಾನೆ. ಅಲ್ಲದೇ ಸಂಶಯಕ್ಕೆ ಎಡೆಯಿಲ್ಲದಂತೆ ಕಾರು ಸಾಲದ ಒಂದನೇ ಕಂತನ್ನು ಪಾವತಿಸಿದ್ದಾನೆ. ನಂತರ ಕಾರನ್ನು ಬ್ಯಾಂಕಿಗೆ ಹಾಜರು ಪಡಿಸಲು ಸೂಚಿಸಿದಾಗ ಹಾಜರುಪಡಿಸಿಲಿಲ್ಲ. ಕಾಯಂ ನೋಂದಣಿಗೆ ಅಗತ್ಯವಾದ ಕಾಗದಪತ್ರಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿರಸಿ ಇಲ್ಲಿಗೆ ಸಲ್ಲಿಸುವಂತೆ ಕಾರು ಮಾರಾಟಗಾರರಾದ ಕೆನರಾ ಮೋಟರ್ಸ್‌ ಪ್ರೈ.ಲಿ.ಗೆ ಕಳಿಸಲಾದ ನೋಟಿಸ್‌ ವಾಪಸ್‌ ಬಂದಿದೆ. ಈ ಹಂತದಲ್ಲಿ ಸಂಶಯ ಉಂಟಾಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಲ್ಲಿಸಿದ ದಾಖಲೆಪತ್ರ, ಕೀಲಿ, ನೋಂದಣಿ ಸಂಖ್ಯೆ ಎಲ್ಲವೂ ನಕಲಿ ಎಂದು ತಿಳಿದುಬಂದಿದೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT