ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನೆಲಕ್ಕುರುಳಿದ ಶತಮಾನದ ಸೇತುವೆ

ಇಂಡೋ–ಬ್ರಿಟಿಷ್ ಶೈಲಿಯ ರಚನೆ: ನಾಲ್ಕು ತಾಸು ಕಾರ್ಯಾಚರಣೆ
Last Updated 4 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಕಾರವಾರ: ‘ಸೇತುವೆಯ ಮಧ್ಯಭಾಗದಲ್ಲಿ ಅಳವಡಿಸಿದ್ದ ಕೀ ಸ್ಟೋನ್ (ಪ್ರಧಾನ ಕಲ್ಲು) ಒಡೆದ ಕೂಡಲೆ ಮುಕ್ಕಾಲು ಪಾಲು ಸೇತುವೆ ಉರುಳಿತು. ಒಂದು ಕಲ್ಲನ್ನು ಆಧರಿಸಿ ಸೇತುವೆ ಗಟ್ಟಿಯಾಗಿ ನಿಂತಿತ್ತು’.

ಇದು ಶಿರಸಿ ತಾಲ್ಲೂಕಿನ ಅಮ್ಮಿನಳ್ಳಿ ಸಮೀಪ ಶಿರಸಿ–ಕುಮಟಾ ಹೆದ್ದಾರಿಯಲ್ಲಿದ್ದ ಸೇತುವೆಯನ್ನು ಶನಿವಾರ ತೆರವುಗೊಳಿಸಿದ ಆರ್.ಎನ್.ಎಸ್. ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯ ಎಂಜಿನಿಯರ್ ಗಳು ಹೇಳಿದ ಮಾತು.

ಜಿಲ್ಲೆಯ ಹಳೆಯದಾದ ಸೇತುವೆಗಳಲ್ಲಿ ಒಂದೆನಿಸಿದ್ದ ಅಮ್ಮಿನಳ್ಳಿ ಸೇತುವೆಯನ್ನು ಹೊಸ ಸೇತುವೆ ನಿರ್ಮಾಣದ ಉದ್ದೇಶಕ್ಕೆ ತೆರವುಗೊಳಿಸಲಾಯಿತು. ಕೇವಲ ನಾಲ್ಕು ತಾಸುಗಳಲ್ಲೇ ಸೇತುವೆ ಪೂರ್ಣ ತೆರವು ಮಾಡಿದ್ದು ಜನರನ್ನು ಅಚ್ಚರಿಗೊಳಪಡಿಸಿತು. ಕಾಂಕ್ರೀಟ್ ಒಡೆಯುವ ಯಂತ್ರದ ಮೂಲಕ ಸೇತುವೆಯ ಕಲ್ಲುಗಳ ಕಮಾನುಗಳನ್ನು ಛಿದ್ರಗೊಳಿಸಲಾಯಿತು.

ಕಾಂಕ್ರೀಟ್ ಬಳಸದೆ, ಕೇವಲ ಗಾರೆ ಮತ್ತು ಸೈಜುಗಳನ್ನು ಬಳಸಿ ನಿರ್ಮಿಸಿದ ಸೇತುವೆ ಶತಮಾನಗಳಷ್ಟು ಹಳೆಯದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಐದು ಮೀ. ಅಗಲ ಮತ್ತು 24 ಮೀ. ಉದ್ದದ ಸೇತುವೆ ಇದಾಗಿದ್ದು ನಾಲ್ಕು ಕಂಬಗಳನ್ನು ಹೊಂದಿತ್ತು. ಒಂದಕ್ಕೊಂದು ಸೈಜುಗಲ್ಲು ಸೇರಿಸಿ ನಿರ್ಮಿಸಲಾಗಿತ್ತು.

‘ಸೇತುವೆಯನ್ನು ಒಡೆಯಲು ಹಲವು ದಿನ ತಗುಲಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೇ ಮಾದರಿಯ ಸೇತುವೆಯನ್ನು ಧಾರವಾಡ ಜಿಲ್ಲೆಯಲ್ಲಿ ಕೆಲವೇ ತಾಸುಗಳಲ್ಲಿ ತೆರವು ಮಾಡಿದ್ದರ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರು. ಬ್ರಿಟಿಷ್ ಕಾಲದ ಸೇತುವೆಗಳಲ್ಲಿ ಪ್ರಧಾನ ಕಲ್ಲು ಆಧರಿಸಿ ಪೂರ್ತಿ ಸೇತುವೆ ನಿಂತಿರುತ್ತದೆ ಎಂಬ ಅರಿವಿತ್ತು. ಹೀಗಾಗಿ ಪ್ರಧಾನ ಕಲ್ಲು ಮೊದಲಿಗೆ ತೆರವು ಮಾಡಲಾಯಿತು’ ಎಂದು ಕಾರ್ಯಾಚರಣೆ ಕುರಿತು ಆರ್.ಎನ್.ಎಸ್. ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯ ಹೆದ್ದಾರಿ ಎಂಜಿನಿಯರ್ ಗೋವಿಂದ ಭಟ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಸೇತುವೆ ನಿರ್ಮಾಣದ ನಿಖರ ಮಾಹಿತಿಯನ್ನು ಸಾಮಾನ್ಯವಾಗಿ ಅಲ್ಲಿನ ಯಾವುದಾದರೂ ಕಲ್ಲುಗಳ ಮೇಲೆ ಕೆತ್ತನೆ ಮಾಡಲಾಗಿರುತ್ತದೆ. ಆದರೆ ಈ ಸೇತುವೆ ನಿರ್ಮಾಣದ ವರ್ಷದ ಮಾಹಿತಿ ತಿಳಿಸುವಯಾವ ಅಂಶವೂ ಅಲ್ಲಿ ಲಭಿಸಲಿಲ್ಲ. ಸೇತುವೆ ನಿರ್ಮಾಣದ ಸಮಯದಲ್ಲಿ ಸಾಮರ್ಥ್ಯ ಮತ್ತು ಸಂಚಾರ ದಟ್ಟಣೆಯ ಸಾಂದ್ರತೆಯನ್ನು ಮುಂದಿನ 50 ವರ್ಷಗಳಿಗೆ ಅಂದಾಜಿಸಿ ಯೋಜನೆ ರೂಪಿಸಿದ್ದಿರಬೇಕು. ಆದರೆ ತನ್ನ ಸಾಮರ್ಥ್ಯ ಮೀರಿ ಸೇತುವೆ ವಾಹನ ಸಂಚಾರದ ಒತ್ತಡ ತಡೆದುಕೊಂಡಿತ್ತು’ ಎಂದರು.

ಮೂರು ತಿಂಗಳಲ್ಲಿ ಹೊಸ ಸೇತುವೆ:

‘ತೆರವುಗೊಂಡ ಅಮ್ಮಿನಳ್ಳಿ ಸೇತುವೆ 5 ಮೀ. ಅಗಲವಿತ್ತು. ಅಲ್ಲಿ 12 ಮೀ. ಅಗಲದ ಹೊಸ ಸೇತುವೆ ಕಟ್ಟಲಾಗುವುದು. ಮುಂದಿನ ಮೂರು ತಿಂಗಳಿನೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲಿಯವರೆಗೆ ವಾಹನ ಸಂಚಾರಕ್ಕೆ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದೇವೆ’ ಎಂದು ಹೆದ್ದಾರಿ ಎಂಜಿನಿಯರ್ ಗೋವಿಂದ ಭಟ್ ತಿಳಿಸಿದರು.

-------------------

ಅಮ್ಮಿನಳ್ಳಿ ಸೇತುವೆ ಶತಮಾನಗಳಷ್ಟು ಕಾಲ ವಾಹನ ಸಂಚಾರದ ಒತ್ತಡ ತಡೆದುಕೊಂಡಿದ್ದರೂ ಶಿಥಿಲ ಆಗದಿರುವುದು ವಾಸ್ತುಶಿಲ್ಪಕ್ಕೆ ಮಾದರಿ. ಅದನ್ನು ಕೆಡವುದರ ಬದಲು ಸಂರಕ್ಷಿಸಿದ್ದರೆ ಚೆನ್ನಾಗಿತ್ತು.

ರಾಘವೇಂದ್ರ ಹೆಗಡೆ

ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT