ಮುಂಡಗೋಡ: ದಟ್ಟ ಕಾನನದ ಮಧ್ಯೆ ವಿಶಾಲವಾಗಿ ವಿಸ್ತರಿಸಿಕೊಂಡಿರುವ, ಧರ್ಮಾ ಜಲಾಶಯ ಈಗ ಮೈದುಂಬಿಕೊಂಡಿದೆ. ಕೋಡಿ ಬಿದ್ದ ನೀರು ಕಣ್ತುಂಬಿಕೊಳ್ಳಬೇಕೆಂಬ ಆಸೆ ಪ್ರವಾಸಿಗರಲ್ಲಿ ಮೂಡಿದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಕಂದುಬಣ್ಣದ ನೀರು, ಪೂರ್ವಾಭಿಮುಖವಾಗಿ ತಿಳಿ ತಿಳಿಯಾಗಿ ರಭಸದಿಂದ ಧುಮ್ಮಿಕ್ಕುತ್ತಿದೆ. ದಿನದಿಂದ ದಿನಕ್ಕೆ ಕೋಡಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯ ಕೋಡಿ ಬಿದ್ದು ವಾರ ಕಳೆದಿದೆ. ಜಲಾಶಯದ ಸೊಬಗು ಸವಿಯಲು ತಂಡೋಪತಂಡವಾಗಿ ಪ್ರವಾಸಿಗರು ಇಲ್ಲಿ ಪ್ರತಿ ವರ್ಷ ಬರುತ್ತಾರೆ. ನಿರಂತರ ಮಳೆಯಿಂದ, ಈ ವರ್ಷವೂ ಧರ್ಮಾ ಭರ್ತಿಯಾಗಿದೆ. ಮಳೆಗಾಲದಲ್ಲಿ ಧರ್ಮಾ ಜಲಾಶಯವನ್ನು ನೋಡುವುದೇ ಒಂದು ಸೊಬಗು. ಕಿ.ಮೀ. ದೂರದ ದಡಭಾಗವನ್ನು ಹೊಂದಿರುವ ಜಲಾಶಯವು, ಪ್ರತಿ ವರ್ಷ ಮಳೆಗಾಲ ಆರಂಭವಾಗಿ ಒಂದೆರೆಡು ತಿಂಗಳಲ್ಲಿಯೇ ಭರ್ತಿಯಾಗುತ್ತದೆ. ಕೋಡಿ ಬೀಳುವ ಜಾಗವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಮಳೆಗಾಲದ ನೀರು ಒಂದೆಡೆ ಸಂಗ್ರಹಗೊಂಡು, ಮತ್ತೊಂದೆಡೆ ಹರಿದು ಹೋಗುವ ಮಧ್ಯದಲ್ಲಿಯೇ ಝರಿಯಂತೆ ಹಂತ ಹಂತವಾಗಿ ಕಾಂಕ್ರೀಟ್ ನೆಲದ ಮೇಲೆ ಬೀಳುವುದನ್ನು ನೋಡಲು ಜನರು ತಾ ಮುಂದು ನಾ ಮುಂದು ಎನ್ನುವಂತಿರುತ್ತದೆ.
ಕೆಲ ದಿನಗಳ ಹಿಂದೆ ಕೋಡಿ ಬಿದ್ದ ಜಲಾಶಯದ ಸೊಬಗನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡ ಹಲವರು, ‘ನಮ್ಮೂರ ಜಲಾಶಯ ಕೋಡಿ ಬಿದ್ದಿದೆ. ಸಮಯ ಇದ್ದರೆ ನೀವೂ ನೋಡಲು ಬನ್ನಿ..ʼ ಎಂದು ‘ರೀಲ್ಸ್ʼ ಮೂಲಕ ಧರ್ಮಾ ಜಲಾಶಯದ ಪ್ರಚಾರ ಮಾಡಿದ್ದರು. ಯುವ ಸಮೂಹ ಹಾಗೂ ರೈತರು ತಂಡೋಪತಂಡವಾಗಿ ಜಲಾಶಯಕ್ಕೆ ಭೇಟಿ ನೀಡಿ, ತುಂಬಿದ ಗಂಗೆಯನ್ನು ಕಣ್ತುಂಬಿಕೊಂಡಿದ್ದರು. ಯುವಸಮೂಹ ಕೋಡಿ ನೀರಿನಲ್ಲಿ ಇಳಿದು ಕುಣಿದು ಕುಪ್ಪಳಿಸಿದರು. ಇನ್ನೂ ಕೆಲವರು ಹರಿಯುವ ನೀರಿನಲ್ಲಿಯೇ ಮೀನು ಹಿಡಿದು ಸಂಭ್ರಮಿಸುತ್ತಿದ್ದರು. ನೀರು ನೋಡಿ ರೋಮಾಂಚನಗೊಂಡ ಹಲವರು ‘ಸೆಲ್ಫಿʼ ಮೂಲಕ ಬೀಳುವ ನೀರಿನ ಪಟವನ್ನು ಮನದಲ್ಲಿ ಉಳಿಯುವಂತೆ ದಾಖಲಿಸಿಕೊಳ್ಳುತ್ತಿದ್ದರು. ಧರ್ಮಾ ಜಲಾಶಯಕ್ಕೆ ಭೇಟಿ ನೀಡಿದ ಹಲವರು, ‘ಭಾರಿ ನೀರು ಬಂದೈತಿ..ʼ ಎಂದು ಉದ್ಗರಿಸುತ್ತಿದ್ದಾರೆ.
ಮೂಲಸೌಕರ್ಯ ಬೇಕಿದೆ: ಪ್ರವಾಸೋದ್ಯಮ ಉತ್ತೇಜನಕ್ಕೆ ಹೇಳಿ ಮಾಡಿಸಿದಂತಿರುವ ಈ ಜಲಾಶಯಕ್ಕೆ ಪ್ರತಿ ವರ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಪ್ರವಾಸೋದ್ಯಮ ದೃಷ್ಟಿಯಿಂದ ಧರ್ಮಾ ಸೊಬಗನ್ನು ಮತ್ತಷ್ಟು ಹೆಚ್ಚಿಸುವಲ್ಲಿ ನೀರಾವರಿ ಇಲಾಖೆಯವರು ವಿಫಲವಾಗಿದ್ದಾರೆ ಎಂಬ ಆರೋಪ ಸಾರ್ವತ್ರಿಕವಾಗಿದೆ.
ಕನಿಷ್ಠ ಮೂರು ತಿಂಗಳು ಕಾಲ ಈ ಜಲಾಶಯಕ್ಕೆ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕೆನ್ನುವ ಯೋಚನೆ ಇನ್ನೂ ಕೂಡ ಸರ್ಕಾರಕ್ಕೆ ಬಂದಿಲ್ಲದಿರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ.
ಪ್ರವಾಸಿಗರಿಗೆ ನಿರ್ಬಂಧ
ಪ್ರತಿ ವರ್ಷ ಕೋಡಿ ಬಿದ್ದ ನಂತರದಲ್ಲಿ ಪ್ರವಾಸಿಗರು ಈ ಜಲಾಶಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈ ವರ್ಷ ಕೋಡಿ ಬಿದ್ದ ಕೆಲವೇ ದಿನಗಳಲ್ಲಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡ ಹೋಗಿ ಮೃತಪಟ್ಟ. ಅಲ್ಲದೇ ನೀರಿನ ರಭಸವೂ ಹೆಚ್ಚಿತ್ತು. ಹೀಗಾಗಿ ಧರ್ಮಾ ಜಲಾಶಯಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ತಾಲ್ಲೂಕು ಆಡಳಿತ ಸದ್ಯದವರೆಗೂ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.